ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಶಿಕಾರಿಪುರದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿಯೇ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಸ್ಪರ್ಧೆ ನೋಡಲು ಹೋದ ಯುವಕನು ಹೋರಿ ತಿವಿತದಿಂದಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಶಿಕಾರಿಪುರ ಮತ್ತು ಸೊರಬ ಈ ಎರಡು ತಾಲೂಕುಗಳಲ್ಲಿ ಹೋರಿ ಸ್ಪರ್ಧೆಯ ಕ್ರೇಜ್ ಹೆಚ್ಚಾಗಿದ್ದು, ಹೀಗಾಗಿ ಬಯಲು ಸೀಮೆಯ ಹೋರಿ ಬೆದರಿಸುವ ಸ್ಪರ್ಧೆಯು ಈ ಎರಡು ತಾಲೂಕಿನಲ್ಲಿ ನಡೆಯುತ್ತವೆ.
ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯನ್ನು ಜ. 21ರಂದು ಆಯೋಜಿಸಲಾಗಿತ್ತು. ರೈತರು ಸಾಕಿದ ಬಲಿಷ್ಠ ಹೋರಿಗಳು ಅಲ್ಲಿಗೆ ಬಂದಿದ್ದವು. ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಪರಶುರಾಮ್(27) ಸ್ಪರ್ಧೆಯನ್ನು ಹತ್ತಿರದಿಂದ ನೋಡುತ್ತಿದ್ದ. ಈ ವೇಳೆ ವೇಗವಾಗಿ ಬಂದ ಹೋರಿ ಪರಶುರಾಮನ ಹೊಟ್ಟೆಗೆ ತಿವಿದಿದೆ. ಈ ವೇಳೆ ಪರಶುರಾಮ್ ಗಾಯಗೊಂಡಿದ್ದು, ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ. ಹೀಗಾಗಿ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ಸಮಿತಿಯ ಅಧ್ಯಕ್ಷ ಮಲ್ಲಿಕ ನಾಯ್ಕ್, ಸತೀಶ್, ಗಂಗಾಧರ್, ದಶರಥ, ಶಿವಕುಮಾರ್ ನಾಯ್ಕ್, ಪವನ, ರವಿಕುಮಾರ್ ಸೇರಿದಂತೆ ಇತರರ ಮೇಲೆ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.