ಹೋಟೆಲ್ ತಿಂಡಿ, ತಿನಿಸುಗಳ ಬೆಲೆ ಏರಿಕೆ
ಬೆಂಗಳೂರು : ಪೆಟ್ರೋಲ್-ಡೀಸೆಲ್, ಅಡುಗೆ ಎಣ್ಣೆ, ಅಡುಗೆ ಅನಿಲ, ವಿದ್ಯತ್ ದರ ಹೆಚ್ಚಾದ ಕಾರಣ ಹೊಟೇಲ್ ತಿಂಡಿ, ತಿನಿಸುಗಳ ಬೆಲೆಯೂ ಏರಿಕೆಯಾಗಿದೆ.
ಸೋಮವಾರ ಬೆಂಗಳೂರು ಹೋಟೆಲ್ ಮಾಲಿಕರ ಸಂಘ ನಡೆಸಿದ ಸಭೆಯಲ್ಲಿ ಹೋಟೆಲ್‌ಗಳ ತಿನಿಸುಗಳ ಬೆಲೆಯನ್ನು ಕನಿಷ್ಠ ಶೇ.10ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿದೆ. ಮುಂದಿನ ಒಂದು ವಾರದೊಳಗೆ ಈ ದರ ಏರಿಕೆ ನಿಯಮ ಅನ್ವಯಿಸಲಿದೆ. ಕೆಲವು ಹೋಟೆಲ್ ಮಾಲಿಕರು ಮಂಗಳವಾರದಿಂದಲೇ ದರ ಏರಿಕೆ ಮಾಡಿದರೂ ಮಾಡಬಹುದು ಎಂದು ಬೆಂಗಳೂರು ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದರು.
ಹೋಟೆಲ್ ತಿಂಡಿ, ಊಟದ ಹಾಲಿ ದರದ ಮೇಲೆ ಶೇ.10ರಷ್ಟುಬೆಲೆ ಏರಿಕೆ ಆಗಲಿದೆ. ಅಂದರೆ 10ರೂ ಕಾಫಿ .12-13 ಆಗಲಿದೆ. ಅದೇ ರೀತಿ 20ರೂ ಉದ್ದಿನ ವಡೆ 25ರೂ ಆಗಲಿದೆ. ಹಾಗೇ ಎರಡು ಇಡ್ಲಿ 25ರೂ ದಿಂದ 30ಕ್ಕೆ ಹಾಗೂ ಊಟ 80ರೂ ದಿಂದ 90ರೂ ಗೆ ಹೆಚ್ಚಾಗಲಿದೆ. ಈಗಾಗಲೇ ದರ ಹೆಚ್ಚಿಸಿರುವ ನಗರದ ಕೆಲವು ಹೋಟೆಲ್‌ಗಳಲ್ಲಿ ಪುನಃ ದರದಲ್ಲಿ ತುಸು ಬದಲಾವಣೆ ಆಗಬಹುದು ಎಂದು ವಿವರಿಸಿದರು.








