ಭೈಯೋಂ ಮೇ ಭಾಯಿ ಕೈಸಾ ಹೋ, ಅಜ್ಜು ಭಾಯಿ ಜೈಸಾ ಹೋ..! (ಅಣ್ಣಂದಿರಲ್ಲಿ ಅಣ್ಣ ಹೇಗಿರಬೇಕು.. ಅಜ್ಜು ಭಾಯಿಯಂತಿರಬೇಕು)
ಇದು ಅಜಯ್ ಶರ್ಮಾ ಅವರನ್ನು ಜಮ್ಮು ಕಾಶ್ಮೀರ ಕ್ರಿಕೆಟ್ ತಂಡದ ಹುಡುಗರು ಕೊಂಡಾಡಿದ ಪರಿ.
ನೆನಪಿರಬೇಕು.. ಇತ್ತೀಚೆಗೆ ರಣಜಿ ಟ್ರೋಫಿ ಸೆಮಿಫೈನಲ್‍ನಲ್ಲಿ ಪಶ್ಚಿಮ ಬಂಗಾಳ ತಂಡವನ್ನು ರೋಚಕವಾಗಿ ಸೋಲಿಸಿದ್ದು ಜಮ್ಮು ಕಾಶ್ಮೀರದ ತಂಡದ ಅಪ್ರತಿಮ ಸಾಧನೆ. ಈ ಸಂಭ್ರಮದ ಕ್ಷಣವನ್ನು ಎಂದೆಂದಿಗೂ ಜಮ್ಮು ಕಾಶ್ಮೀರ ಕ್ರಿಕೆಟ್ ಮರೆಯಲು ಸಾಧ್ಯನೇ ಇಲ್ಲ. ಯಾಕಂದ್ರೆ ಅದು ಅಂತಿಂಥ ಗೆಲುವಲ್ಲ. ಸೋಲಿನ ಭೀತಿ ಕಣ್ಣೇದುರು ಇದ್ರೂ, ಜೀವ ಬಿಟ್ಟು ಹೋರಾಡಿ ಗೆಲುವನ್ನು ಕೈ ವಶಮಾಡಿಕೊಂಡಿದ್ದ ಜಮ್ಮ ಕಾಶ್ಮೀರ ಕ್ರಿಕೆಟ್ ಹುಡುಗರ ವಿಜಯೋತ್ಸಾಹಕ್ಕೆ ಇತಿಮಿತಿಗಳಿರಲಿಲ್ಲ. ಅಲ್ಲಿ ಆಡಿದ್ದು ಆಟಗಾರರು. ಗೆಲುವು ಸಿಕ್ಕಿದ್ದು ಸಂಘಟಿತ ಆಟಕ್ಕೆ. ಆದ್ರೆ ಈ ವಿರೋಚಿತ ಗೆಲುವನ್ನು ಅರ್ಪಣೆ ಮಾಡಿದ್ದು ತಂಡದ ಹೆಡ್ ಕೋಚ್ ಅಜಯ್ ಶರ್ಮಾಗೆ.
ಅಷ್ಟೇ ಅಲ್ಲ, ಕಲ್ಯಾಣಿ ಅಂಗಣದಲ್ಲಿ ಅಜಯ್ ಶರ್ಮಾ ಅವರನ್ನು ಜಮ್ಮು ಕಾಶ್ಮೀರದ ಆಟಗಾರರು ತಮ್ಮ ಹೆಗಲ ಮೇಲೆ ಹೊತ್ತು ಇಡೀ ಮೈದಾನ ಸುತ್ತಾಡಿ ಸಂಭ್ರಮಾಚರಣೆ ಮಾಡಿದ್ರು. ಖಡಕ್ ಹೆಡ್ ಮಾಸ್ಟರ್‍ನಂತಿದ್ದ ಅಜಯ್ ಶರ್ಮಾ ಕೂಡ ಹುಡುಗರ ಪ್ರೀತಿ, ಗೌರವಕ್ಕೆ ಭಾವುಕರಾಗಿದ್ರು. ಒಂದು ಕ್ಷಣ, 15 ವರ್ಷಗಳ ಕಾಲ ಪಟ್ಟ ಅವಮಾನ, ಏಕಾಂಗಿತನ, ನೋವು, ಹತಾಶೆ ಎಲ್ಲವೂ ಕಣ್ಣೇದುರು ಬಂದು ಹೋದವು.
ಆಟಗಾರನಾಗಿ ಅಜಯ್ ಶರ್ಮಾ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಕ್ರಿಕೆಟ್ ಮೈದಾನದಿಂದಲೇ ದೂರವೇ ಉಳಿದಿದ್ದರು. ಸುಮಾರು ಒಂದೂವರೆ ದಶಕಗಳ ಕಾಲ ಕಾನೂನು ಹೋರಾಟ ಮಾಡಿ ಕ್ಲೀನ್ ಚಿಟ್ ಸಿಕ್ಕಿದ್ದು ತುಸು ನೆಮ್ಮದಿಯನ್ನುಂಟು ಮಾಡಿದ್ರೂ ಮನದೊಳಗಿನ ನೋವು ಪದೆ ಪದೇ ಕಾಡುತ್ತಿರುತ್ತಿತ್ತು. ಅಂತಹುದರಲ್ಲಿ ಜಮ್ಮು ಕಾಶ್ಮೀರದ ತಂಡದ ಹೆಡ್ ಕೋಚ್ ಆಗಿ ಐತಿಹಾಸಿಕ ಸಾಧನೆ ಮಾಡಿದಾಗ ಅಂಟಿಕೊಂಡಿದ್ದ ಕಪ್ಪು ಚುಕ್ಕೆ ಕೂಡ ಅಳಿಸಿ ಹೋದಾಂತಾಯ್ತು. ಮರ್ಯಾದೆ ಕಳೆದುಕೊಂಡಿದ್ದ ಕ್ರಿಕೆಟ್ ಮೈದಾನದಲ್ಲೇ ತನ್ನ ಶಿಷ್ಯರು ತನ್ನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡಿದಾಗ ಘಾಸಿಗೊಂಡಿದ್ದ ಅಜಯ್ ಶರ್ಮಾ ಅವರ ಹೃದಯದಲ್ಲಿದ್ದ ಕಲ್ಮಶವೆಲ್ಲಾ ಕಣ್ಣಲ್ಲಿ ಆನಂದಬಾಷ್ಟವಾಗಿ ಸುರಿಯುತ್ತಿತ್ತು. ಇದೀಗ ಮತ್ತೊಂದು ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಏನು ಆಗುತ್ತೋ ಗೊತ್ತಿಲ್ಲ. ಆದ್ರೆ ಗೆದ್ರೆ ಹೊಸ ಪರಂಪರೆಗೆ ಮುನ್ನುಡಿಯಾಗುತ್ತದೆ. ಒಂದು ವೇಳೆ ಸೋತ್ರೆ ಇತಿಹಾಸವಾಗುತ್ತದೆ.
ಜಮ್ಮು ಕಾಶ್ಮೀರ ಕ್ರಿಕೆಟ್ ತಂಡಕ್ಕೆ ಅಜಯ್ ಶರ್ಮಾ ಹೆಡ್ ಕೋಚ್ ಆಗಿದ್ದೇಗೆ..?
ಮ್ಯಾಚ್ ಫಿಕ್ಸಿಂಕ್ ಕಳಂಕದಿಂದ ಮುಕ್ತಿ ಪಡೆದ ನಂತರ ಅಜಯ್ ಶರ್ಮಾ ದೆಹಲಿ 19 ವಯೋಮಿತಿ ತಂಡದ ತರಬೇತುದಾರನಾಗಿದ್ದರು. ತನ್ನ ಮೇಲಿನ ಆರೋಪದಿಂದಾಗಿ ತನ್ನ ಮಗ ಮನನ್ ಶರ್ಮಾನ ಕ್ರಿಕೆಟ್ ಭವಿಷ್ಯವೂ ಕಮರಿ ಹೋಗಿತ್ತು. ಭಾರತಕ್ಕಾಗಿ ಆಡಿಸಬೇಕು ಎಂದು ಕನಸು ಕಂಡಿದ್ದ ಅಜಯ್ ಶರ್ಮಾನ ಜೊತೆ ಯಾರು ಕೂಡ ಮಾತನಾಡುತ್ತಿರಲಿಲ್ಲ. ಆದ್ರೆ ಕ್ಲೀನ್ ಚಿಟ್ ಸಿಕ್ಕಿದ ನಂತರ ಶರ್ಮಾ ಮತ್ತೆ ಗುರುವಾಗಿ ಯುವ ಆಟಗಾರರಿಗೆ ತರಬೇತಿ ನೀಡುವುದರಲ್ಲಿ ತಲ್ಲೀಣರಾದ್ರು. ಹಾಗೇ ದೆಹಲಿ ರಣಜಿ ತಂಡದ ತರಬೇತುದಾರನಾಗುವತ್ತ ಚಿತ್ತವನ್ನಿಟ್ಟಿದ್ದರು.
ಅದು 2021ರಲ್ಲಿ ಅಜಯ್ ಶರ್ಮಾ ಅವರು ಫ್ಯಾಮಿಲಿ ಜೊತೆ ಥಾಯ್ಲೆಂಡ್ ಪ್ರವಾಸದಲ್ಲಿದ್ದರು. ಆಗ ಶರ್ಮಾ ಅವರಿಗೆ ಈಗಿನ ಬಿಸಿಸಿಐ ಅಧ್ಯಕ್ಷ ಮಿಥುನ್ ಮನ್ಹಾಸ್ ಕರೆ ಮಾಡಿ, ಜಮ್ಮು ಕಾಶ್ಮೀರ ತಂಡದ ಹೆಡ್ ಕೋಚ್ ಆಗುವಂತೆ ಮನವಿ ಮಾಡ್ತಾರೆ. ಆದ್ರೆ ಅಜಯ್ ಶರ್ಮಾ ಜೋರಾಗಿ ನಕ್ಕು, “ಅದೆಲ್ಲಾ ಆಗಲ್ಲ ಬಿಡಿ, ದೇಸಿ ಟೂರ್ನಿಗಳಲ್ಲಿ ನಾವು ಜಮ್ಮು ಕಾಶ್ಮೀರ ತಂಡವನ್ನು ಲಘುವಾಗಿ ಪರಿಗಣಿಸುತ್ತಿದ್ದೇವು. ಅದು ನಿನಗೂ ಗೊತ್ತಲ್ವಾ..? ಅಷ್ಟೇ ಅಲ್ಲ, ನಾನು ದೆಹಲಿ ರಣಜಿ ತಂಡದ ಕೋಚ್ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ” ಎಂದು ಹೇಳಿ ಮಿಥುನ್ ಮನ್ಹಾಸ್ ಮನವಿಯನ್ನು ಮೊದಲು ನಿರಾಕರಿಸಿದ್ದರು. ಆದ್ರೆ ಮನ್ಹಾಸ್ ಹಠ ಬಿಡಲಿಲ್ಲ. ಮತ್ತೆ ಮತ್ತೆ ಅಜಯ್ ಶರ್ಮಾ ಜೊತೆ ಮಾತುಕತೆ, ಚರ್ಚೆ ನಡೆಸಿದ್ದರು. ಯಾಕಂದ್ರೆ ಮಿಥುನ್ ಮನ್ಹಾಸ್ ಕೂಡ ಅಜಯ್ ಶರ್ಮಾ ಗರಡಿಯಲ್ಲೇ ಪಳಗಿದವರು. ಅವರ ಸಾಮಥ್ರ್ಯ ಏನು ಎಂಬುದು ಗೊತ್ತಿತ್ತು. ಇನ್ನೊಂದೆಡೆ, ಮಿಥುನ್ ಮನ್ಹಾಸ್‍ಗೆ ಜಮ್ಮು ಕಾಶ್ಮೀರ ಕ್ರಿಕೆಟ್ ಗೆ ಹೊಸ ಕಾಯಕಲ್ಪ ನೀಡಬೇಕು ಎಂದು ಹಠಮಾರಿಯಂತೆ ಶ್ರಮಿಸುತ್ತಿದ್ದರು. “ನನ್ನ ತವರೂರಿನ ಜಮ್ಮು ಕಾಶ್ಮೀರ ತಂಡ ದೇಸಿ ಕ್ರಿಕೆಟ್ ನಲ್ಲಿ ಉತ್ತುಂಗಕ್ಕೇರುವುದು ನನ್ನ ಕನಸು. ಅದನ್ನು ಸಾಕಾರಗೊಳಿಸಲು ನಿಮ್ಮ ಸಹಾಯ ಬೇಕು” ಎಂದು ಸೆಂಟಿಮೆಂಟ್ ಮಾತಿನಿಂದಲೇ ಅಜಯ್ ಶರ್ಮಾ ಅವರನ್ನು ಒಪ್ಪಿಸಲು ಮಿಥುನ್ ಮನ್ಹಾಸ್ ಯಶಸ್ವಿಯಾದ್ರು.
ಸರಿ, 2021-22ರ ಋತುವಿನಲ್ಲಿ ಜಮ್ಮು ಕಾಶ್ಮೀರ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಅಜಯ್ ಶರ್ಮಾ ನೇಮಕಗೊಂಡಾಗ ಯಾವುದೇ ಪ್ಲ್ಯಾನ್‍ಗಳಿರಲಿಲ್ಲ. ತಂಡದ ಆಟಗಾರರ ಜೊತೆಗಿನ ಮೊದಲ ಭೇಟಿಯಲ್ಲೇ ಸಮಸ್ಯೆ ಇರೋದು ಎಲ್ಲಿ ಎಂಬುದನ್ನು ಅರ್ಥಮಾಡಿಕೊಂಡಿದ್ದರು.
“ಜಮ್ಮು ಕಾಶ್ಮೀರದ ಹುಡುಗರಿಗೆ ಕ್ರಿಕೆಟ್ ಅಂದ್ರೆ ಹೊಡಿಬಡಿ ಆಟ. ಮೊದಲ ಎಸೆತವನ್ನೇ ಬೌಂಡರಿ, ಸಿಕ್ಸರ್‍ಗಟ್ಟಬೇಕು ಎಂಬ ಮನೋಭಾವನೆಯವರು. ಅಲ್ಲದೆ ಐಪಿಎಲ್ ಟೂರ್ನಿಯ ನೆಟ್ಸ್ ನಲ್ಲಿ ಬೌಲಿಂಗ್ ಮಾಡುವುದೇ ದೊಡ್ಡ ಸಾಧನೆ ಅಂತ ಬೌಲರ್‍ಗಳು ಭಾವಿಸಿದ್ದರು. ಇನ್ನು ಐಪಿಎಲ್‍ನಲ್ಲಿ ಆಡಿರುವ ಆಟಗಾರರಲ್ಲಿ ಸೂಪರ್ ಸ್ಟಾರ್ ಸಂಸ್ಕøತಿ ಎದ್ದು ಕಾಣುತ್ತಿತ್ತು. ಹೀಗಾಗಿ ಈ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಿಂದ ಶುರು ಮಾಡಬೇಕು ಎಂಬುದು ಗೊತ್ತಾಗಲಿಲ್ಲ. ಆದ್ರೆ ಮಿಥುನ್ ಮನ್ಹಾಸ್ ಮತ್ತು ಬ್ರಿಗೇಡಿಯರ್ ಅನಿಲ್ ಗುಪ್ತಾ ಅವರ ಸಲಹೆಯಿಂದ ನನ್ನ ಯೋಚನೆ, ಯೋಜನೆಗಳನ್ನು ಬದಲಾಯಿಸಿಕೊಂಡೆ ಅಂತಾರೆ ಅಜಯ್ ಶರ್ಮಾ.
ಜೆಕೆ ತಂಡದಲ್ಲಿ ಪ್ರತಿಭಾವಂತ ಹುಡುಗರು ಇದ್ರೂ ಶಿಸ್ತು ಇರಲಿಲ್ಲ. ಅಹಂ ಮತ್ತು ಒಣಪ್ರತಿಷ್ಠೆಯಿಂದ ತಂಡದಲ್ಲಿ ಒಗ್ಗಟ್ಟು ಇರಲಿಲ್ಲ. ವೃತ್ತಿಪರತೆ, ಬದ್ದತೆಯೂ ಇರಲಿಲ್ಲ. ಹೊರಗಿನವರು ಬಂದು ನಮಗೇನೂ ಹೇಳುವುದು ಅನ್ನೋ ದರ್ಪವಿತ್ತು. ಹೀಗಾಗಿ ಅಜಯ್ ಶರ್ಮಾ ಹೆಡ್‍ಮಾಸ್ಟರ್‍ನ ರೀತಿಯಂತೆ ವರ್ತಿಸುವುದು ಅನಿವಾರ್ಯವಾಗಿತ್ತು. ಪರಿಣಾಮ ಅಜಯ್ ಶರ್ಮಾ ಸರ್ವಾಧಿಕಾರಿ ಕೋಚ್ ಎಂದು ಆಡಳಿತ ಮಂಡಳಿಗೆ ದೂರುಗಳು ಬಂದಿದ್ದವು. ಆದ್ರೆ ಅಜಯ್ ಶರ್ಮಾಗೆ ಮಿಥುನ್ ಮನ್ಹಾಸ್ ಬೆನ್ನಿಗೆ ನಿಂತಿರುವುದರಿಂದ ಆಟಗಾರರು ಕೂಡ ಅನಿವಾರ್ಯವಾಗಿ ಅಜಯ್ ಶರ್ಮಾ ಹೇಳಿದಂತೆ ಕೇಳಲೇಬೇಕಾಯ್ತು.
ಪಂದ್ಯದಿಂದ ಪಂದ್ಯಕ್ಕೆ ಆಟಗಾರರ ಮನಸ್ಥಿತಿಗಳು ಬದಲಾದವು. ಪ್ರತಿಭೆ, ಆತ್ಮವಿಶ್ವಾಸ, ಧೈರ್ಯವಿದ್ರೂ, ತಾಳ್ಮೆ, ಬದ್ದತೆ, ಪರಿಶ್ರಮ, ಕೌಶಲ್ಯಗಳಿಂದ ಪಂದ್ಯ ಗೆಲ್ಲಬಹುದು ಎಂಬುದು ಜೆಕೆ ಆಟಗಾರರಿಗೆ ಮನವರಿಕೆ ಆಯ್ತು. ನಿಧಾನವಾಗಿ ಡ್ರೆಸಿಂಗ್ ರೂಮ್‍ನಲ್ಲೂ ಬದಲಾವಣೆಗಳು ಕಂಡುಬಂದವು. ಸ್ಟಾರ್ ಗಿರಿ ಸಂಸ್ಕøತಿಯನ್ನು ಕಿತ್ತು ಹಾಕಿದ್ರು. ಪ್ರತಿಯೊಬ್ಬ ಆಟಗಾರನಲ್ಲೂ ಪ್ರತಿಭೆ, ಸಾಮಥ್ರ್ಯ ಇದೆ ಎಂದು ಬೊಟ್ಟು ಮಾಡಿ ತೋರಿಸುತ್ತಿದ್ದರು. ಅದರಲ್ಲೂ ಮುಂಬೈ ವಿರುದ್ದ ವಿಕೆಟ್ ಕೈ ಚೆಲ್ಲಿಕೊಂಡಿದ್ದ ಅಬ್ದುಲ್ ಸಮಾದ್‍ನನ್ನು ಮುಂದಿನ ಪಂದ್ಯಕ್ಕೆ ಕೈಬಿಟ್ಟಾಗ ಯಾರು ತಂಡಕ್ಕೆ ಅನಿವಾರ್ಯ ಅಲ್ಲ ಎಂಬ ಸಂದೇಶವನ್ನೂ ರವಾನಿಸಿದ್ರು. ಹೀಗೆ ಆಟಗಾರರ ಮನಸ್ಥಿತಿಯನ್ನು ಬದಲಾಯಿಸಿದ್ದ ಅಜಯ್ ಶರ್ಮಾ ಜೆಕೆ ತಂಡದ ಅಚ್ಚು ಮೆಚ್ಚಿನ ಹಿರಿಯಣ್ಣನಾದ್ರು. ಅದಕ್ಕಾಗಿ ಜಮ್ಮು ಕಾಶ್ಮೀರ ಹುಡುಗರ ಬಾಯಲ್ಲಿ ನಲಿದಾಡುತ್ತಿರುವ ಘೋಷ ವಾಕ್ಯ
“ಭೈಯೋಂ ಮೇ ಭಾಯಿ ಕೈಸಾ ಹೋ, ಅಜ್ಜು ಭಾಯಿ ಜೈಸಾ ಹೋ..!” (ಅಣ್ಣಂದಿರಲ್ಲಿ ಅಣ್ಣ ಹೇಗಿರಬೇಕು.. ಅಜ್ಜು ಭಾಯಿಯಂತಿರಬೇಕು)
ಸನತ್ ರೈ








