2007 ಟಿ-ಟ್ವೆಂಟಿ ವಿಶ್ವಕಪ್ – ಪಾಕ್ ವಿರುದ್ಧ ಬೌಲ್ ಔಟ್ ನಲ್ಲಿ ಧೋನಿಗೆ ಪ್ರಸಾದ್ ಹೇಳಿದ್ದೇನು ?
2007ರ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್… ಹೊಸ ಮಾದರಿಯ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಟೀಮ್ ಇಂಡಿಯಾದ ಸಾರಥ್ಯವನ್ನು ವಹಿಸಿದ್ದು ಮಹೇಂದ್ರ ಸಿಂಗ್ ಧೋನಿ. ಆ ಟೂರ್ನಿಗೆ ಟೀಮ್ ಇಂಡಿಯಾಗೆ ಕೋಚ್ ಇರಲಿಲ್ಲ. ತಂಡಕ್ಕೆ ಮ್ಯಾನೇಜರ್ ಆಗಿ ಲಾಲ್‍ಚಂದ್ ರಜಪೂತ್ ಮತ್ತು ಬೌಲಿಂಗ್ ಕೋಚ್ ಆಗಿ ವೆಂಕಟೇಶ್ ಪ್ರಸಾದ್ ಇದ್ರು. ಆಗ ಟೀಮ್ ಇಂಡಿಯಾ ಗೆಲ್ಲುತ್ತೆ ಅಂತ ಯಾರು ಕೂಡ ಊಹೆ ಮಾಡಿರಲಿಲ್ಲ. ಆದ್ರೆ ಎಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿ ಟೀಮ್ ಇಂಡಿಯಾ ಚಾಂಪಿಯನ್ ಆಗಿದ್ದು ಈಗ ಇತಿಹಾಸ.
ಟೂರ್ನಿಯಲ್ಲಿ ಟೀಮ್ ಇಂಡಿಯಾ ಹಲವು ರೋಚಕ ಪಂದ್ಯಗಳನ್ನು ಆಡಿ ಗೆಲುವು ಸಾಧಿಸಿತ್ತು. ಅದ್ರರಲ್ಲಿ ಒಂದು ಪಾಕಿಸ್ತಾನ ವಿರುದ್ಧದ ಲೀಗ್ ಪಂದ್ಯ. ನಿಗದಿತ ಓವರ್‍ಗಳಲ್ಲಿ ಪಂದ್ಯ ಟೈಗೊಂಡ ಕಾರಣ ಫಲಿತಾಂಶವನ್ನು ನಿರ್ಧರಿಸಿದ್ದು ಬೌಲ್ ಔಟ್. ಈ ಬಾಲ್ ಔಟ್‍ನಲ್ಲೂ ಟೀಮ್ ಇಂಡಿಯಾ ರಿಸ್ಕ್ ತೆಗೆದುಕೊಂಡಿತ್ತು.
ತಂಡದ ಪ್ರಮುಖ ಬೌಲರ್‍ಗಳ ಬದಲು ಸೆಹ್ವಾಗ್ ಮತ್ತು ರಾಬಿನ್ ಉತ್ತಪ್ಪ ಅವರಿಗೆ ಬೌಲಿಂಗ್ ಮಾಡುವ ಅವಕಾಶ ನೀಡಲಾಗಿತ್ತು. ಈ ಬಗ್ಗೆ ವೆಂಕಟೇಶ್ ಪ್ರಸಾದ್ ಈಗ ಮಾತನಾಡಿದ್ದಾರೆ. ಸೆಹ್ವಾಗ್ ಮತ್ತು ಉತ್ತಪ್ಪ ಅವರಿಗೆ ಬೌಲಿಂಗ್ ಮಾಡುವ ಅವಕಾಶ ಹೇಗೆ ಸಿಕ್ಕಿತ್ತು ? ಧೋನಿಯನ್ನು ಯಾವ ರೀತಿ ಮನವೊಲಿಸಲಾಗಿತ್ತು ಎಂಬ ವಿಚಾರಗಳನ್ನು ವೆಂಕಟೇಶ್ ಪ್ರಸಾದ್ ಹೇಳಿಕೊಂಡಿದ್ದಾರೆ.
ವಿಶ್ವಕಪ್‍ಗೆ ಮುನ್ನವೇ ನಮಗೆ ನಿಯಮಗಳು ಗೊತ್ತಿದ್ದವು. ಆಗ ಪಂದ್ಯ ಟೈಗೊಂಡಾಗ ಸೂಪರ್ ಓವರ್ ಇರಲಿಲ್ಲ. ಬದಲಾಗಿ ಬೌಲ್ ಔಟ್ ನಿಯಮವಿತ್ತು. ಹೀಗಾಗಿ ನಾವು ಅಭ್ಯಾಸದ ವೇಳೆಯಲ್ಲಿ ಬೌಲ್ ಔಟ್ ಕೂಡ ಅಭ್ಯಾಸ ನಡೆಸುತ್ತಿದ್ದೇವು. ಅಲ್ಲದೆ ಬೌಲರ್ ಮತ್ತು ಬ್ಯಾಟ್ಸ್‍ಮೆನ್‍ಗಳ ನಡುವೆ ಸ್ಪರ್ಧೆಯನ್ನಿಟ್ಟಿದ್ದೇವು. ಹಲವು ಬ್ಯಾಟ್ಸ್ ಮೆನ್‍ಗಳು ಬೌಲ್ ಔಟ್‍ನಲ್ಲಿ ಚೆನ್ನಾಗಿಯೇ ಬೌಲಿಂಗ್ ಮಾಡುತ್ತಿದ್ದರು. ಧೋನಿ, ಸೆಹ್ವಾಗ್, ಉತ್ತಪ್ಪ ಹೀಗೆ ನೆಟ್ಸ್ ನಲ್ಲಿ ಸ್ಪರ್ಧೆ ನಡೆಯುತ್ತಿತ್ತು ಎಂದು ಆ ದಿನಗಳನ್ನು ಅಶ್ವಿನ್ ಜೊತೆಗಿನ ಕಾರ್ಯಕ್ರಮದಲ್ಲಿ ನೆನಪು ಮಾಡಿಕೊಂಡಿದ್ದಾರೆ ವೆಂಕಟೇಶ್ ಪ್ರಸಾದ್.
ನಾನು ಇದನ್ನೆಲ್ಲಾ ಗಮನಿಸುತ್ತಿದ್ದೆ. ನನಗೆ ಗೊತ್ತಿತ್ತು. ಯಾರು ಸ್ಥಿರವಾಗಿ ವಿಕೆಟ್ ಮೇಲೆ ಬೌಲಿಂಗ್ ಮಾಡುತ್ತಾರೆ ಎಂಬುದು. ಸೆಹ್ವಾಗ್, ಉತ್ತಪ್ಪ ಹಾಗೂ ಹರ್ಭಜನ್ ಸ್ಥಿರವಾಗಿ ವಿಕೆಟ್ ಮೇಲೆ ಬೌಲಿಂಗ್ ಮಾಡುತ್ತಿದ್ದರು. ಆದ್ರೆ ಮೊದಲ ಪಂದ್ಯ ಟೈ ಆಗುತ್ತೆ ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ನಮ್ಮ ಮೊದಲ ಪಂದ್ಯದ ಫಲಿತಾಂಶ ನಿರ್ಧಾರವಾಗಿದ್ದು ಕೂಡ ಬೌಲ್ ಔಟ್‍ನಲ್ಲೇ. ಆ ಸಂದರ್ಭದಲ್ಲಿ ನನಗೆ ಧೋನಿಯ ಮನವೋಲಿಸುವುದು ದೊಡ್ಡ ಕಷ್ಟವೇನೂ ಆಗಲಿಲ್ಲ. ಯಾಕಂದ್ರೆ ಇವರೆಲ್ಲಾ ನೆಟ್ಸ್ ಬೌಲ್ ಔಟ್‍ನಲ್ಲಿ ಚೆನ್ನಾಗಿಯೇ ಅಭ್ಯಾಸ ಮಾಡಿದ್ದರು ಎಂದು ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ.