ಬೇಕಾಗಿರುವ ಪದಾರ್ಥಗಳು:-
1 ಹಿಡಿ ಹುಣಸೆಹಣ್ಣು (ನೆನೆಸಿ, ಕಿವುಚಿಟ್ಟುಕೊಳ್ಳಬೇಕು)
1–2 ದೊಡ್ಡ ಚಮಚ ಹುರಿದಿರುವ ಎಳ್ಳು
ಹುರಿದು ಪುಡಿ ಮಾಡಲು:-
8–10 ಒಣಮೆಣಸಿನಕಾಯಿ
2 ಬ್ಯಾಡಗಿ ಮೆಣಸಿನ ಕಾಯಿ
2–3 ದೊಡ್ಡ ಚಮಚ ಕೊತ್ತಂಬರಿ ಬೀಜ
1/2 ಚಮಚ ಜೀರಿಗೆ
1/4 ಚಮಚ ಮೆಂತ್ಯದ ಕಾಳು
4–5 ಕಾಳು ಮೆಣಸು
ಒಗ್ಗರಣೆಗೆ:-
5–6 ಚಮಚ ಎಣ್ಣೆ
1 ಚಿಕ್ಕ ಚಮಚ ಸಾಸಿವೆ
1 ಚಮಚ ಉದ್ದಿನಬೇಳೆ
1 ಚಮಚ ಕಡಲೆಬೇಳೆ
1 ಹಿಡಿ ಕಡಲೆಕಾಯಿ ಬೀಜ
1–2 ಒಣಮೆಣಸಿನಕಾಯಿ
1/4 ಚಮಚ ಅರಿಶಿನ ಪುಡಿ
ಕರಿಬೇವು.
ಇತರೆ:-
ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:-
ಮೊದಲು ದಪ್ಪ ತಳದ ಬಾಣಲೆಯಲ್ಲಿ ಪುಡಿ ಮಾಡಲು ಬೇಕಾದ ಪದಾರ್ಥಗಳನ್ನು ಒಂದರ ನಂತರ ಒಂದನ್ನು ಸಣ್ಣ ಉರಿಯಲ್ಲಿ ಬೇರೆ ಬೇರೆಯಾಗಿ ಹುರಿದು ತಣ್ಣಗಾದ ಮೇಲೆ ಪುಡಿ ಮಾಡಿಟ್ಟುಕೊಳ್ಳಬೇಕು.
ಅದೇ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಸಾಸಿವೆ ಸಿಡಿಸಿ ಉದ್ದಿನಬೇಳೆ, ಕಡಲೆಬೇಳೆ, ಕಡಲೆಕಾಯಿ ಬೀಜವನ್ನು ಸೇರಿಸಿ ಹುರಿದುಕೊಂಡು , ಒಣಮೆಣಸಿನಕಾಯಿ ಹಾಗೂ ಕರಿಬೇವು, ಅರಿಶಿನ ಪುಡಿ ಸೇರಿಸಿ ಒಗ್ಗರಣೆ ಮಾಡಿ. ಇದಕ್ಕೆ ಮೊದಲೇ ಕಿವುಚಿಟ್ಟುಕೊಂಡಿರುವ ಹುಣಸೆರಸವನ್ನು ಸೇರಿಸಿ ಗಟ್ಟಿಯಾಗುವವರೆಗೂ ಕುದಿಸಿಕೊಳ್ಳಬೇಕು. ಇದಕ್ಕೆ ಹುರಿದು ಪುಡಿ ಮಾಡಿರುವ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಬೇಕು.ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಬೇಕು, ಖಾರ ಕಡಿಮೆ ಅನಿಸಿದರೆ ಸ್ವಲ್ಪ ಅಚ್ಚ ಖಾರದ ಪುಡಿ ಸೇರಿಸಿಕೊಳ್ಳಬಹುದು.
ಒಲೆಯಿಂದ ಇಳಿಸಿದ ನಂತರ ಹುರಿದಿರುವ ಎಳ್ಳನ್ನು ತರಿತರಿಯಾಗಿ ಪುಡಿಮಾಡಿ ಗೊಜ್ಜಿಗೆ ಸೇರಿಸಿ ಕಲಸುವುದು.
ಈ ರೀತಿಯಂತೆ ಗೊಜ್ಜು ತಯಾರಿಸಿಕೊಂಡು ಬೇಕಾದಾಗ ಅನ್ನಕ್ಕೆ ಬೆರೆಸಿಕೊಂಡು ಪುಳಿಯೊಗರೆ ತಯಾರಿಸಿಕೊಳ್ಳಬಹುದು .