ಪೌರಾಣಿಕವಾಗಿಯೂ ಶ್ರೇಷ್ಟ, ಧಾರ್ಮಿಕ ನಂಬಿಕೆಯಲ್ಲಿ ಉಚ್ಛ ಸ್ಥಾನ ಪಡೆದ ಅಶೋಕ ವೃಕ್ಷದ ಆಯುರ್ವೇದಿಕ್ ಮಹತ್ವ ನಿಮಗೆಷ್ಟು ಗೊತ್ತು?
ಅಶೋಕ ಹಿಂದೂ ಸಂಸ್ಕೃತಿಯಲ್ಲಿ ಒಂದು ಪರಮಪಾವನ ವೃಕ್ಷ. ರಾವಣ ಸೀತಾಮಾತೆಯನ್ನು ಅಪಹರಿಸಿ ಈ ಅಶೋಕ ವೃಕ್ಷಗಳಿಂದ ಕೂಡಿದ ವನದಲ್ಲಿಯೇ ಅಡಗಿಸಿಟ್ಟಿದ್ದನಂತೆ. ಕಾಳಿದಾಸನ ಕಾಲದಲ್ಲಂತೂ ಈ ಮರಕ್ಕೆ ಇನ್ನಿಲ್ಲದ ಪ್ರಾಶಸ್ತ್ಯ ದೊರೆತಿದೆ. ವಸಂತಕಾಲದಲ್ಲಿ ಒಂದು ನಿಶ್ಚಿತ ದಿನದಂದು ಯುವತಿಯೊಬ್ಬಳು ತನ್ನ ಎಡಗಾಲಿನಿಂದ ಮೃದುವಾಗಿ ಅಶೋಕವೃಕ್ಷವನ್ನು ಒದ್ದರೆ ಆ ಮರದಲ್ಲಿ ಗರ್ಭಾಂಕುರವಾಗುತ್ತಿತ್ತೆಂದು ಭೋಜರಾಜನ ಸರಸ್ವತೀ ಕಂಠಾಭರಣ, ಕಾಳಿದಾಸನ ಮಾಲವಿಕಾಗ್ನಿಮಿತ್ರ, ಹರ್ಷನ ರತ್ನಾವಳೀ ಗ್ರಂಥಗಳಲ್ಲಿ ಹೇಳಲಾಗಿದೆ. ಚೈತ್ರ ಶುಕ್ಲ ಅಷ್ಟಮಿಯಂದು ವ್ರತ ಮಾಡಿ ಅಶೋಕದ ಎಂಟು ಎಲೆಗಳನ್ನು ತಿಂದರೆ ಸ್ತ್ರೀಯರಿಗೆ ಸಂತಾನ ಪ್ರಾಪ್ತಿಯಾಗುವುದೆಂಬ ನಂಬಿಕೆ ಇದೆ. ಇನ್ನು ಗೌತಮ ಬುದ್ಧನೂ ಸಹ ಅಶೋಕವನದಲ್ಲಿಯೇ ಜನಿಸಿದ್ದನೆಂಬ ಪ್ರತೀತಿ ಇದೆ. ಹೀಗಾಗಿ ಬೌದ್ಧವಿಹಾರಗಳಲ್ಲಿ ಈ ಮರಗಳಿಗೆ ವಿಶೇಷ ಪ್ರಾಧಾನ್ಯತೆ ಇರುತ್ತದೆ.
ಅಶೋಕ ನಿಧಾನವಾಗಿ ಬೆಳೆಯುವ ನಿತ್ಯ ಹಸಿರಿನ ಮರ. ನೀಳವಾಗಿ ಚೂಪಾಗಿರುವ ಎಲೆಗಳಿಂದ ಕೂಡಿದ ಮರದ ತುಂಬಾ ಗೊಂಚಲು ಗೊಂಚಲು ಹೂಗಳಿರುತ್ತವೆ. ಈ ಗಿಡದ ಕಾಯಿಗಳು ಕಂದು ಬಣ್ಣದವಾಗಿರುತ್ತವೆ. ಹತ್ತು ಸೆಂಟಿಮೀಟರ್ ಉದ್ದವಾಗಿರುವ ಕಾಯಿಗಳ ಒಳಗಡೆ ಸಾಲಾಗಿ ಬೀಜಗಳಿರುತ್ತವೆ. ಈ ಮರಗಳು ಈಶಾನ್ಯ ಭಾರತದ ಕಾಡುಗಳಲ್ಲಿ ಹಾಗೂ ಕರ್ನಾಟಕದಲ್ಲಿ ಹೇರಳವಾಗಿ ಕಂಡುಬರುತ್ತವೆ. ಗಂಧಪುಷ್ಪ, ಹೇಮಪುಷ್ಪ, ಪಿಂಡಪುಷ್ಪ, ತಾಮ್ರಪುಷ್ಪ, ಶಂಕೇಲಿ, ರಕ್ತಪಲ್ಲವ ಇವು ಅಶೋಕದ ಪರ್ಯಾಯ ಪದಗಳು.
ಸಸ್ಯಶಾಸ್ತ್ರದಲ್ಲಿ ಅಶೋಕ ಮರಕ್ಕೆ ಸೆರೆಕಾ ಇಂಡಿಕಾ ಎಂಬ ಹೆಸರಿದೆ. ಹೆಸರೇ ಹೇಳುವಂತೆ ಅಶೋಕ ಎಂದರೆ ಶೋಕವಿಲ್ಲದ್ದು ಎಂಬ ಅರ್ಥವಿದೆ. ಚರಕ ಸಂಹಿತೆಯಲ್ಲಿ ಅಶೋಕವೃಕ್ಷದ ಔಷಧೀಯ ಗುಣಗಳ ಉಲ್ಲೇಖವಿದೆ. ಮರದ ತೊಗಟೆ, ಹೂ, ಬೀಜಗಳನ್ನು ಒಣಗಿಸಿ, ಪುಡಿ ಮಾಡಿ ಬಳಸುತ್ತಾರೆ. ಅಶೋಕಾರಿಷ್ಟ, ಅಶೋಕಘೃತ ಎಂಬ ಔಷಧಿಗಳನ್ನು ನಾವು ಆಯುರ್ವೇದದ ಅಂಗಡಿಗಳಲ್ಲಿ ಕಾಣಬಹುದು. ತೊಗಟೆಯಲ್ಲಿ ಟ್ಯಾನಿನ್ ಅಂಶವಿರುತ್ತದೆ. ತೊಗಟೆಯ ಪುಡಿಯನ್ನು ಸ್ವಲ್ಪ ಚಹಾದೊಂದಿಗೆ ಸೇರಿಸುವುದರಿಂದ ಚಹಾದ ರುಚಿ ಹಾಗೂ ಬಣ್ಣದಲ್ಲಿ ಹೆಚ್ಚಳವಾಗುವುದು.
ಅಶೋಕ ಚಕ್ಕೆಯು ಸ್ತ್ರೀಯರ ಆರೋಗ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಶೋಕ ಮರದ ಚಕ್ಕೆಯ ಪುಡಿಯನ್ನು ತುಪ್ಪದ ಜೊತೆ ಬೆರೆಸಿ ಸೇವಿಸುವುದರಿಂದ ಗರ್ಭಾಂಗಗಳು ದಷ್ಟಪುಷ್ಟವಾಗುತ್ತದೆ. ಅಶೋಕವೃಕ್ಷದ ಬೀಜವನ್ನು 3 ರಿಂದ 6 ಗ್ರಾಂ ನಷ್ಟು ಬಿಸಿನೀರು ಅಥವಾ ಹಾಲಿನಲ್ಲಿ ಸೇವಿಸುವುದರಿಂದ ಮೂತ್ರ ಕಲ್ಲು, ಮೂತ್ರ ಮಾಡುವಾಗ ಉಂಟಾಗುವ ತೊಂದರೆಗಳ ನಿವಾರಣೆಯಾಗುತ್ತದೆ. ಅಶೋಕ ಚೂರ್ಣ, ಜೀರಿಗೆ ಪುಡಿ, ಕಲ್ಲುಸಕ್ಕರೆಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಕುಡಿಯುವುದರಿಂದ ರಕ್ತಪಿತ್ತ ರೋಗವು ನಿವಾರಣೆಯಾಗುತ್ತದೆ. ಅಶೋಕ ಚಕ್ಕೆಯ ಕಷಾಯ ಅಥವಾ ಪುಡಿಯನ್ನು ಸೇವಿಸುವುದರಿಂದ ರಕ್ತಮೂಲವ್ಯಾಧಿ ನಿವಾರಣೆಯಾಗುತ್ತದೆ. ಅಶೋಕ ವೃಕ್ಷದ ಹೂವುಗನ್ನು ನುಣ್ಣಗೆ ಅರೆದು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ, ಬರುವ ಎಣ್ಣೆಯನ್ನು ಚರ್ಮಕ್ಕೆ ಹಚ್ಚುವುದರಿಂದ ಚರ್ಮರೋಗಕ್ಕೆ ಒಳ್ಳೆಯದು.
ಮಾಹಿತಿ ಮತ್ತು ಲೇಖನ:- ಅಂಬಿಕಾ ಸೀತೂರು