ಭಾರತದ ಎಚ್‌ಎಸ್‌ಟಿಡಿವಿ ಹಾರಾಟ ಪರೀಕ್ಷೆ ಯಶಸ್ವಿ
ಹೊಸದಿಲ್ಲಿ, ಸೆಪ್ಟೆಂಬರ್08: ಭಾರತವು ಯಶಸ್ವಿಯಾಗಿ ಹೈಪರ್ಸಾನಿಕ್ ತಂತ್ರಜ್ಞಾನದ ಹಾರಾಟವನ್ನು ಪರೀಕ್ಷಿಸಿದ್ದು, ಇದು ಶಬ್ದದ ಆರು ಪಟ್ಟು ವೇಗದಲ್ಲಿ ಪ್ರಯಾಣಿಸುವ ಕ್ಷಿಪಣಿಗಳ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ.
ಈ ಯಶಸ್ವಿ ಪ್ರದರ್ಶನದೊಂದಿಗೆ, ದೇಶವು ಎಚ್‌ಎಸ್‌ಟಿಡಿವಿ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ ದೇಶಗಳ ಪಟ್ಟಿಗೆ ಸೇರ್ಪಡೆಯಾಗಿದೆ . ಸುಧಾರಿತ ಹೈಪರ್ಸಾನಿಕ್ ವಾಹನಗಳ ತಯಾರಿಕೆಗೆ ಇದು ಒಂದು ಮಹತ್ವದ ಹೆಜ್ಜೆಯಾಗಿದೆ. ಈ ತಂತ್ರಜ್ಞಾನದಲ್ಲಿ ಯಶಸ್ವಿ ಹಾರಾಟ ನಡೆಸಿದ ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾದ ನಂತರ ಭಾರತ ನಾಲ್ಕನೇ ದೇಶವಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹೈಪರ್‌ಸಾನಿಕ್ ಟೆಕ್ನಾಲಜಿ ಡೆಮನ್‌ಸ್ಟ್ರೇಶನ್ ವೆಹಿಕಲ್ (ಎಚ್‌ಎಸ್‌ಟಿಡಿವಿ) ಯ ಹಾರಾಟ ಪರೀಕ್ಷೆಯೊಂದಿಗೆ ಹೈಪರ್ಸಾನಿಕ್ ಏರ್ ಸ್ಕ್ರಾಮ್‌ಜೆಟ್ ತಂತ್ರಜ್ಞಾನವನ್ನು ಸೋಮವಾರ ಬೆಳಿಗ್ಗೆ 11:03 ಗಂಟೆಗೆ ವೀಲರ್ ದ್ವೀಪದಲ್ಲಿರುವ ಎಪಿಜೆ ಅಬ್ದುಲ್ ಕಲಾಂ ಲಾಂಚ್ ಕಾಂಪ್ಲೆಕ್ಸ್‌ನಿಂದ ಯಶಸ್ವಿಯಾಗಿ ಪ್ರದರ್ಶಿಸಿದೆ.
ಈ ಮೈಲಿಗಲ್ಲು ಸಾಧಿಸಿದ ಡಿಆರ್‌ಡಿಒಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಸಿದ್ದು ಅದರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಹೈಪರ್ಸಾನಿಕ್ ಕ್ರೂಸ್ ವಾಹನವನ್ನು ಸಾಬೀತಾದ ಘನ ರಾಕೆಟ್ ಮೋಟರ್ ಬಳಸಿ ಉಡಾವಣೆ ಮಾಡಲಾಯಿತು, ಅದನ್ನು 30 ಕಿ.ಮೀ ಎತ್ತರಕ್ಕೆ ಕೊಂಡೊಯ್ದಿತು ಮತ್ತು 2500 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ದಹನ ತಾಪಮಾನವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿತ್ತು ಎಂದು ಡಿಆರ್‌ಡಿಒ ಹೇಳಿಕೆಯಲ್ಲಿ ತಿಳಿಸಿದೆ.