ಜಗತ್ತಿನಾದ್ಯಂತ ಕೊರೋನಾ ತಾಂಡವ ವಾಡುತ್ತಿದೆ. ಈಗಾಗಲೇ ವಿಶ್ವದಾದ್ಯಂತ 4983ಕ್ಕೂ ಹೆಚ್ಚು ಜನ ಕೊರೋನಾಗೆ ಬಲಿಯಾಗಿದ್ದರೆ, ಸುಮಾರು 1,34,769 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕರ್ನಾಟಕದಲ್ಲೂ 5 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಂದು ಸಾವು ಸಂಭವಿಸಿದೆ. ಈಗ ಎಲ್ಲಿ ನೋಡಿದರೂ ಕೊರೋನಾ ವೈರಸ್ ನದ್ದೇ ಸುದ್ದಿ.
ಕೊರೊನಾ ಮತ್ತು ಮದ್ಯದ ವಿಚಾರ ಕರ್ನಾಟಕದ ಅಸೆಂಬ್ಲಿಯಲ್ಲೂ ಪ್ರಸ್ತಾಪ ವಾಗಿದ್ದು, ಬ್ರಾಂದಿಯ ಮಹತ್ವವನ್ನು ಕೆಲವು ಸದಸ್ಯರು ನಗೆ ಚಟಾಕಿ ಹಾರಿಸಿ ವಿವರಿಸಿದರು. ಮೇಲ್ಮನೆ ವಿಧಾನ ಪರಿಷತ್ ನಲ್ಲೂ ಕೊರೋನಾದ ಬಗ್ಗೆ ಹಾಸ್ಯಭರಿತ ಚರ್ಚೆ ನಡೆದಿದ್ದು, ಕೊರೋನಾಗೆ ಬ್ರಾಂದಿ ಮದ್ದು ಎನ್ನುವ ಮಾತು ಕೇಳಿ ಬಂತು.
ಜೆಡಿಎಸ್‍ನ ಮರಿತಿಬ್ಬೇಗೌಡರು ಸಂವಿಧಾನದ ಬಗ್ಗೆ ಮಾತನಾಡುತ್ತಾ, ಕೊರೋನಾ ವೈರಸ್ ಬಗ್ಗೆ ಪ್ರಸ್ತಾಪಿಸಿದರು. ಜಗತ್ತಿನಾದ್ಯಂತ ಜನ ಕೊರೋನಾ ವೈರಸ್ ನಿಂದ ಸಾವನಪ್ಪುತ್ತಿದ್ದಾರೆ. ಮುಕ್ಕೋಟಿ ದೇವರುಗಳು ಎಲ್ಲಿ ಹೋದರು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಗೆ ಪ್ರಶ್ನೆ ಮಾಡಿದರು. ಆ ದೇವರಿಗೂ ಕೊರೊನಾ ಸೋಂಕು ಗುಣಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಬೆಳಗ್ಗೆ ಆದ್ರೆ ಸಾಕು ವಿಭೂತಿ ಹಚ್ಚಿ ಕೊಂಡು ಜ್ಯೋತಿಷಿಗಳು ಟಿವಿನಲ್ಲಿ ಬರುತ್ತಾರೆ. ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಹೇಳುತ್ತಾರೆ. ಈಗ ಇಡೀ ವಿಶ್ವವೇ ಕೊರೊನಾದ ಭಯದಲ್ಲಿ ನಡುಗುತ್ತಿದೆ. ಎಲ್ಲದರ ಬಗ್ಗೆ ಮಾತನಾಡುವ ಮಠಗಳು ಎಲ್ಲಿ ಹೋದವು. ಈಗ ಆ ಜ್ಯೋತಿಷಿಗಳು ಎಲ್ಲಿದ್ದಾರೆ. ಕೊರೊನಾ ತಡೆಯಲು ಆಗುವುದಿಲ್ಲವೇ ಎಂದು ಟಿವಿಯಲ್ಲಿ ಬರುವ ಜ್ಯೋತಿಷಿ
ಗಳ ಮೇಲೆ ತಮ್ಮ ಆಕ್ರೋಶವನ್ನು ತೋರಿಸಿದರು.
ತಮ್ಮ ಮಾತನ್ನು ಮುಂದುವರಿಸಿದ ಮರಿತಿಬ್ಬೇಗೌಡರು ಆ ಸಣ್ಣ ವೈರಸ್ ನನ್ನು ನಾಶ ಮಾಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಕೊರೋನಾ ಸಾಯಿಸಲು ಬ್ರಾಂದಿ ರಾಮಬಾಣವೆಂದೂ, ಬ್ರಾಂದಿ ಬಳಸುವುದರಿಂದ ಕೊರೊನಾ ದೂರ ಓಡಿಸಬಹುದೆಂದು ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಅಬಕಾರಿ ಇಲಾಖೆಗೆ ಕೊರೋನಾದಿಂದ ಭರ್ಜರಿ ವ್ಯಾಪಾರ ಆಗಬಹುದು. ಅಬಕಾರಿ ಸಚಿವರು ಇನ್ನಷ್ಟು ಸ್ವಲ್ಪ ದಿನ ಕೊರೋನಾ ವೈರಸ್ ಇರಲಿ ಎಂದು ಬಯಸ ಬಹುದು. ಆಗ ಅಬಕಾರಿ ಇಲಾಖೆಗೆ ಒಳ್ಳೆಯ ಆದಾಯ ಹರಿದು ಬರುತ್ತದೆ ಎಂದು ಹಾಸ್ಯ ಮಾಡಿದರು.
ಅದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ಪಿ. ಆರ್ ರಮೇಶ್, ಈ ಹಿಂದೆ ಪ್ಲೇಗ್ ಎಂಬ ಮಹಾ ಮಾರಿ ಬಂದಿತ್ತು. ಆಗ ಪ್ಲೇಗಮ್ಮ ಎಂದು ದೇವಾಲಯ ನಿರ್ಮಿಸಲು ಪ್ರಾರಂಭಿಸಿದರು. ಈಗ ಕೊರೋನಾ ಬಂದಿದೆ. ಕೊರೊನಮ್ಮ ಎಂದು ದೇವಾಲಯ ಪ್ರಾರಂಭಿಸಿ ಅಲ್ಲಿ ಬ್ರಾಂದಿಯನ್ನು ತೀರ್ಥ ವೆಂದು ಕೊಡ ಬೇಕು ಎಂದು ತಮಾಷೆ ಮಾಡಿದರು.
ದೇವಾಲಯಗಳು, ಮಸೀದಿಗಳು, ಚರ್ಚ್ ಗಳು ಕೊರೊನಾಗೆ ಏನೂ ಮಾಡಲು ಸಾಧ್ಯವಿಲ್ಲ. ಅಷ್ಟು ದೇವರು ಇರುವುದಾದರೆ ಕೊರೊನಾ ಓಡಿಸಲಿ ಎಂದು ದೇವರುಗಳಿಗೆ ಸವಾಲು ಹಾಕಿದರು.
ಯಾರೂ ಮಾಡದ ಕೆಲಸವನ್ನು ಬ್ರಾಂದಿ ಮಾಡಬಹುದು. ಬ್ರಾಂದಿಯನ್ನು ಹೊಟ್ಟೆಗೆ ಮತ್ತು ಕೈಗೆ ಹಾಕಿಕೊಂಡರೆ, ಕೊರೊನಾ ವೈರಾಣು ಸತ್ತು ಹೋಗುತ್ತದೆ. ಹಾಗಾಗಿ, ಏನು ಬೇಕಾದರೂ ಬಂದ್ ಮಾಡಿ ಆದರೆ, ಬಾರ್ ಮಾತ್ರ ಬಂದ್ ಮಾಡಬೇಡಿ” ಎಂದು ಜೆಡಿಎಸ್‍ನ ಮರಿತಿಬ್ಬೇಗೌಡರು ಹಾಸ್ಯ ಚಟಾಕಿ ಹಾರಿಸಿದರು.








