ಹಣಕ್ಕಾಗಿ ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದ ಪತಿ
ಬೆಂಗಳೂರು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಆಕೆಯ ಕತ್ತಿಗೆ ವೇಲ್ ನಿಂದ ಬಿಗಿದು ಪತಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮುನೇಶ್ವರ ನಗರದಲ್ಲಿ ನಡೆದಿದೆ.
ಪತ್ನಿ ಸೌಮ್ಯ ಮೃತ ದುರ್ದೈವಿ. ಯೋಗೇಶ್ (28) ಕೊಲೆ ಆರೋಪಿ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಯೋಗೇಶ್ ಮತ್ತು ಸೌಮ್ಯ ಪ್ರೀತಿಸಿ ಮದುವೆಯಾಗಿದ್ದರು. ಯೋಗೇಶ್ ವೃತ್ತಿಯಲ್ಲಿ ಚಾಲಕನಾದಿದ್ದು, ಸೌಮ್ಯ ಖಾಸಗಿ ಕಂಪನಿಯೊಂದರ ಕೆಲಸ ಮಾಡುತ್ತಿದ್ದರು. ಇವರ ಸಾಂಸಾರಿಕ ಜೀವನ ಆರಂಭಿಕ ದಿನಗಳಲ್ಲಿ ಹಾಲು-ಜೇನಿನಂತೆ ಸುಖವಾಗಿತ್ತು.
ಆದರೆ ಇತ್ತೀಚಿಗೆ ಯೋಗೇಶ್ ಪತ್ನಿ ಸೌಮ್ಯಗೆ ತವರು ಮನೆಯಿಂದ ಹಣ ಮತ್ತು ಚಿನ್ನ ತರಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಪೀಡಿಸುತ್ತಿದ್ದನಂತೆ. ಈ ವಿಷಯ ತಿಳಿದ ಸೌಮ್ಯಳ ತವರು ಮನೆಯವರು, ಮಗಳು ಚೆನ್ನಾಗಿರಲಿ ಎಂದು ಸೌಮ್ಯಳ ಮನೆಯವರು ಎರಡು ಬಾರಿ ಹಣ ಕೊಟ್ಟಿದ್ದರು.
ಇಷ್ಟಕ್ಕೆ ತೃಪ್ತಿ ಪಡೆದ ಯೋಗೇಶ್ ಮತ್ತೆ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದಾನೆ. ಕಳೆದ ಮೂರು ದಿನದಿಂದ ತವರು ಮನೆಯಿಂದ ಅರ್ಜೆಂಟ್ ಆಗಿ 2 ಲಕ್ಷ ಹಣ ತರುವಂತೆ ಪತ್ನಿ ಸೌಮ್ಯ ಜತೆ ಮನೆಯಲ್ಲಿ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಕುಪಿತಗೊಂಡ ಯೋಗೇಶ್ ವೇಲ್‌ನಿಂದ ಕುತ್ತಿಗೆ ಬಿಗಿದು ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸುದ್ದಿ ತಿಳಿದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.