ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು (ವಿದ್ಯುತ್) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹೆಚ್. ವಿ. ರಮೇಶ್ ರವರು ಜವಾಬ್ದಾರಿಯುತ ಅಧಿಕಾರಿಯಾಗಿದ್ದು, ಬೀದಿ ದೀಪಗಳ ನಿರ್ವಹಣೆಯ ಉಸ್ತುವಾರಿಯನ್ನು ಅಥವಾ ಮೇಲ್ವಿಚಾರಣೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುವುದು ಆದ್ಯ ಕರ್ತವ್ಯವಾಗಿರುತ್ತದೆ.
ದಿನಾಂಕ:28.08.2026ರ ಸಂಜೆ ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರು ಹಡ್ಸನ್ ವೃತ್ತದಿಂದ ಚಾಲುಕ್ಯ ವೃತ್ತದವರೆಗಿನ ರಸ್ತೆಯಲ್ಲಿ ಖುದ್ದಾಗಿ ವಿದ್ಯುತ್ ಬೀದಿ ದೀಪಗಳ ಪರಿವೀಕ್ಷಣೆ ಮಾಡುವ ಸಂದರ್ಭದಲ್ಲಿ ಒಟ್ಟು 222 ಪೈಕಿ 140 ವಿದ್ಯುತ್ ಕಂಬಗಳಲ್ಲಿನ ದೀಪಗಳು ಕಾರ್ಯನಿರ್ವಹಿಸದಿರುವುದು ಕಂಡು ಬಂದಿರುತ್ತದೆ.
ಈ ಸಂಬಂಧ ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಈಗಾಗಲೇ 2 ಬಾರಿ ಸಭೆಯನ್ನು ಮಾಡಿ, ಬೀದಿ ದೀಪಗಳ ನಿರ್ವಹಣೆಯ ಕಟ್ಟುನಿಟ್ಟಾಗಿ ಯಾವುದೇ ಲೋಪದೋಷಗಳಿಲ್ಲದಂತೆ ನಿರ್ವಹಿಸಲು ಸೂಚಿಸಿರುತ್ತಾರೆ. ಹಾಗೂ ದಿ:04-08-2026 ರಂದು ಮಾನ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಸಹ ಸದರಿ ವಿಷಯದ ಬಗ್ಗೆ, ಹೆಚ್ಚು ಗಮನಹರಿಸುವಂತೆ ನಿರ್ದೇಶನ ನೀಡಿರುತ್ತಾರೆ.
ಆದರೂ ಸಚಿವರ ಸೂಚನೆ-ನಿರ್ದೇಶನಗಳನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಇಂದು (ಮಂಗಳವಾರ) ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ತತ್ ಕ್ಷಣಕ್ಕೆ ಜಾರಿಯಾಗುವಂತೆ ಕಾರ್ಯಪಾಲಕ ಅಭಿಯಂತರರಾದ (ವಿದ್ಯುತ್) ಹೆಚ್. ವಿ. ರಮೇಶ್ ಅವರನ್ನು ಅಮಾನತ್ತುಗೊಳಿಸಲಾಗಿದೆ








