ಸನ್ ರೈಸರ್ಸ್ ಹೈದರಾಬಾದ್ ತಂಡ ಆರ್ ಸಿಬಿ ವಿರುದ್ಧ ಐತಿಹಾಸಿಕ ಸ್ಕೋರ್ ದಾಖಲಿಸಿದೆ. ಈ ಐಪಿಎಲ್ ಇತಿಹಾಸದಲ್ಲಿಯೇ ಅತೀ ದೊಡ್ಡ ಸ್ಕೋರ್ ಇದಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿತ್ತು. ಇದೇ ಆವೃತ್ತಿಯಲ್ಲಿ ಹೈದರಾಬಾದ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ ಗಳಿಸಿ ಇನ್ನಿಂಗ್ಸ್ ವೊಂದರಲ್ಲಿ ತಂಡ ಗಳಿಸಿದ ಹೆಚ್ಚಿನ ಸ್ಕೋರ್ ದಾಖಲೆ ಬರೆದಿತ್ತು. ಆದರೆ, ಕೆಲವೇ ದಿನಗಳಲ್ಲಿ ತನ್ನ ದಾಖಲೆಯನ್ನು ತಾನೇ ಮುರಿದಿದೆ.
ಹೈದರಾಬಾದ್ ಪರ ಆರಂಭಿಕ ಅಭಿಷೇಕ್ ಶರ್ಮಾ ಆರಂಭದಲ್ಲಿ 22 ಎಸೆತಗಳಲ್ಲಿ 34 ರನ್ ಗಳಿಸಿದ್ದರು. ಟ್ರಾವಿಸ್ ಹೆಡ್ ಕೇವಲ 41 ಎಸೆತಗಳಲ್ಲಿ 102 ರನ್ ಗಳಿಸಿದ್ದರು. ಹೆನ್ರಿಚ್ ಕ್ಲಾಸೆನ್ ಕೂಡ 67 ರನ್ ಬಾರಿಸಿದರು. ಕೊನೆಯಲ್ಲಿ ಐಡೆನ್ ಮಾರ್ಕ್ರಾಮ್ 17 ಎಸೆತಗಳಲ್ಲಿ 32 ರನ್ ಹಾಗೂ ಅಬ್ದುಲ್ ಸಮದ್ 10 ಎಸೆತಗಳಲ್ಲಿ 37 ರನ್ ಕಲೆಹಾಕಿದರು. ಹೈದರಾಬಾದ್ ಆಟಗಾರರು ಒಂದೆಡೆ ಅಬ್ಬರಿಸುತ್ತಿದ್ದರೆ, ಆರ್ ಸಿಬಿ ಬೌಲರ್ ಗಳು ಎಲ್ಲಿಯೂ ಪ್ರತಿರೋಧ ಒಡ್ಡದಂತೆ ಕಂಡು ಬಂದರು. ವೇಗಿ ರೀಸ್ ಟೋಪ್ಲಿ 4 ಓವರ್‌ಗಳಲ್ಲಿ 68 ರನ್ ನೀಡಿದರೆ, ಲಾಕಿ ಫರ್ಗುಸನ್ 4 ಓವರ್‌ಗಳಲ್ಲಿ 52 ರನ್ ನೀಡಿದರು.
ಯಶ್ ದಯಾಳ್ ಕೂಡ 4 ಓವರ್‌ಗಳಲ್ಲಿ 51 ರನ್ ನೀಡಿದರೆ, ವೈಶಾಕ್ ವಿಜಯಕುಮಾರ್ 4 ಓವರ್‌ಗಳಲ್ಲಿ 64 ಕೊಟ್ಟರು. ಹೀಗೆ ಆರ್ ಸಿಬಿಯ ನಾಲ್ವರು ವೇಗಿಗಳು ಬೌಲಿಂಗ್ ನಲ್ಲಿ ಅರ್ಧ ಶತಕಕ್ಕೆ ಕಾರಣವಾಗಿದ್ದೇ ಹೈದರಾಬಾದ್ ಸ್ಕೋರ್ ಏರುವಂತಾಯಿತು.