ರೈಲು ನಿಲ್ದಾಣದಲ್ಲಿ ನೀರು ತರುತ್ತೇನೆ ಅಂತ ಹೋದ ಪತ್ನಿ ಮತ್ತೊಬ್ಬನ ಬೈಕ್ ಹತ್ತಿ ಎಸ್ಕೇಪ್ ಆಗಿದ್ದಳು..!
ಹೈದರಾಬಾದ್ : ರೈಲು ನಿಲ್ದಾಣವೊಂದ್ರಲ್ಲಿ ಮಹಿಳೆಯೊಬ್ಬಳು ತನ್ನ ಪತಿಗೆ ನೀರು ತರೋದಾಗಿ ಹೇಳಿ ತನ್ನ ಮಗುವನ್ನ ಕರೆದು ಹೋಗಿದ್ದಳು. ಆದ್ರೆ ಎಷ್ಟು ಹೊತ್ತಾದ್ರೂ ವಾಪಸ್ ಬಂದಿರಲಿಲ್ಲ. ಗಂಟೆಗಟ್ಟಲೆ ಕಾಯ್ದರೂ ಪತ್ನಿ ಮತ್ತು ಮಗು ಮರಳಿ ಬಾರದ ಹಿನ್ನೆಲೆ ಆತಂಕಗೊಂಡ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಬಳಿಕ ಪೊಲೀಸರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆತನ ಪತ್ನಿ ಮಗುವಿನ ಜೊತೆ ಮತ್ತೊಬ್ಬನ ಬೈಕ್ ನಲ್ಲಿ ಪರಾರಿಯಾಗಿರುವುದು ಗೊತ್ತಾಗಿದೆ.
ರಾಜಸ್ಥಾನದ ಜೋಧ್ ಪುರ ಜಿಲ್ಲೆಯ ಬಾರಿ ಖಾಕೊಂಡ ಗ್ರಾಮದ ನಿವಾಸಿ ಪ್ರಭುದಾಸ್ ಖಾಸಗಿ ಕಂಪನಿಯೊಂದ್ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಈತ 2013ರಲ್ಲಿ ರಮ್ಯಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಇಬ್ಬರಿಗೂ 2 ವರ್ಷದ ಮಗನಿದ್ದಾನೆ.
ಏಪ್ರಿಲ್ 2ರಂದು ಪ್ರಭುದಾಸ್ ತನ್ನ ಪತ್ನಿ ಮತ್ತು ಮಗುವಿನೊಂದಿಗೆ ಹೈದರಾಬಾದ್ನಲ್ಲಿರುವ ತನ್ನ ಅಜ್ಜಿ ಮನಗೆ ತೆರಳಿದ್ದ. ಬಳಿಕ ಏಪ್ರಿಲ್ 4ರಂದು ರಾಜಸ್ಥಾನಕ್ಕೆ ಹಿಂದಿರುಗಲು ರೈಲು ಟಿಕೆಟ್ ಬುಕ್ ಮಾಡಿದ್ದ. ಹೊರಡಬೇಕಾದ ದಿನ ಬೆಳಗ್ಗೆ 9 ಗಂಟೆಗೆ ತನ್ನ ಪತ್ನಿ ಮತ್ತು ಮಗನೊಂದಿಗೆ ಪ್ರಭುದಾಸ್ ಸಿಕಂದರಬಾದ್ ರೈಲು ನಿಲ್ದಾಣಕ್ಕೆ ಬಂದಿದ್ದ. ರೈಲಿಗಾಗಿ ಕಾಯುವ ನಡುವೆ ಮಗನೊಂದಿಗೆ ನೀರು ತರಲೆಂದು ಹೊರ ಹೋದ ಆತನ ಪತ್ನಿ ಮತ್ತೊಬ್ಬನ ಜೊತೆಗೆ ಎಸ್ಕೇಪ್ ಆಗಿದ್ದಾಳೆ. ಅಷ್ಟೇ ಅಲ್ಲದೇ ಓಡಿ ಹೋಗುವಾಗ 2 ಪೌಂಡ್ ಚಿನ್ನಾಭರಣ ಹಾಗೂ 20 ಸಾವಿರ ರೂಪಾಯಿ ಹಣ ಹೊತ್ತೊಯ್ದಿದ್ದಾಳೆ ಎಂದು ಪತಿ ಆರೋಪಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.








