ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ತವರು ಕ್ಷೇತ್ರವಾದ ಗೋರಖ್‌ಪುರದಲ್ಲಿ ವಿರೋಧ ಪಕ್ಷಗಳ ವಿರುದ್ಧ ಕೆಂಡಕಾರಿದ್ದಾರೆ. ರಾಮಮಂದಿರ ನಿರ್ಮಾಣದ ಹಾದಿಯಲ್ಲಿ ಮುಳ್ಳಾಗಿದ್ದವರು ಇಂದು ಧರ್ಮದ ಬಗ್ಗೆ ಉಪದೇಶ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಗುಡುಗಿದ್ದಾರೆ. ಸಮಾಜವಾದಿ ಪಕ್ಷದ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಸೈಫಾಯಿ ಸಿಂಡಿಕೇಟ್ ಮತ್ತು ಹಿಂದಿನ ಸರ್ಕಾರಗಳ ಭ್ರಷ್ಟಾಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಒಂದು ಕಾಲದಲ್ಲಿ ಹಬ್ಬಗಳ ಸಮಯದಲ್ಲಿ ಗಲಭೆಗಳನ್ನು ಸೃಷ್ಟಿಸಿ, ಜನರ ನಂಬಿಕೆಯ ಮೇಲೆ ದಾಳಿ ನಡೆಸುತ್ತಿದ್ದವರು ಇಂದು ದೊಡ್ಡ ಭಕ್ತರಂತೆ ನಾಟಕವಾಡುತ್ತಿದ್ದಾರೆ ಎಂದು ಯೋಗಿ ಕಿಡಿಕಾರಿದ್ದಾರೆ. 2017 ಕ್ಕಿಂತ ಮೊದಲು ಉತ್ತರ ಪ್ರದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿತ್ತು. ರಾಮನವಮಿ, ಹೋಳಿ, ವಿಜಯದಶಮಿ ಅಥವಾ ಕನ್ವರ್ ಯಾತ್ರೆಗಳಿಗೆ ನಿರಂತರವಾಗಿ ಅಡೆತಡೆ ಒಡ್ಡಲಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಭದ್ರತೆ ಮತ್ತು ಶಾಂತಿಯ ವಾತಾವರಣದಲ್ಲಿ ರಾಜ್ಯವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೈಗಾರಿಕಾ ಕ್ಷೇತ್ರದಲ್ಲಿನ ಹಿನ್ನಡೆಗೆ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರಗಳೇ ಕಾರಣ ಎಂದು ಆರೋಪಿಸಿದ ಯೋಗಿ, 29 ಸಕ್ಕರೆ ಕಾರ್ಖಾನೆಗಳನ್ನು ಕವಡೆ ಕಾಸಿನ ಬೆಲೆಗೆ ಮಾರಾಟ ಮಾಡಿದ ಹಗರಣವನ್ನು ನೆನಪಿಸಿದರು. ಸುಮಾರು 200 ಕೋಟಿ ರೂಪಾಯಿ ಮೌಲ್ಯದ ಪದ್ರೌನಾ ಸಕ್ಕರೆ ಕಾರ್ಖಾನೆಯ ಭೂಮಿಯನ್ನು ಕೇವಲ 2 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಇದು ಅಂದಿನ ಆಡಳಿತದ ಭ್ರಷ್ಟಾಚಾರಕ್ಕೆ ಸಾಕ್ಷಿ. ಯುವಜನತೆಯ ಉದ್ಯೋಗವನ್ನು ಲೂಟಿ ಮಾಡಿದ ಸೈಫಾಯಿ ಸಿಂಡಿಕೇಟ್, ಇಡೀ ರಾಜ್ಯದ ಯುವಶಕ್ತಿಗೆ ಗುರುತಿನ ಬಿಕ್ಕಟ್ಟು ಸೃಷ್ಟಿಸಿತ್ತು ಎಂದು ಅವರು ಕಟುವಾಗಿ ಟೀಕಿಸಿದರು.
ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಮೆಲುಕು ಹಾಕಿದ ಅವರು, ಇಂದು ಗೋರಖ್‌ಪುರದಲ್ಲಿ ಏಮ್ಸ್ ಸ್ಥಾಪನೆಯಾಗಿದೆ ಮತ್ತು ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜುಗಳು ತಲೆ ಎತ್ತುತ್ತಿವೆ. ಈ ಹಿಂದೆ ಸಾವಿರಾರು ಮಕ್ಕಳ ಪ್ರಾಣ ಬಲಿಪಡೆಯುತ್ತಿದ್ದ ಎನ್ಸೆಫಾಲಿಟಿಸ್ ಎಂಬ ಮಾರಕ ರೋಗವನ್ನು ನಿರ್ಮೂಲನೆ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಯಾವುದೇ ತಾರತಮ್ಯವಿಲ್ಲದೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಮತ್ತು ರಾಜ್ಯದ ಸಮೃದ್ಧಿಯನ್ನು ಕಾಪಾಡುವುದು ನಮ್ಮ ಬದ್ಧತೆಯಾಗಿದೆ ಎಂದು ಯೋಗಿ ಆದಿತ್ಯನಾಥ್ ಸಾರಿದ್ದಾರೆ. 995 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ಅವರು ವಿರೋಧ ಪಕ್ಷಗಳಿಗೆ ಅಭಿವೃದ್ಧಿಯ ಸಂದೇಶ ರವಾನಿಸಿದ್ದಾರೆ.








