ನಾನೂ ಕೂಡ ಪ್ಲಾಸ್ಮಾ ದಾನ ಮಾಡುತ್ತೇನೆ - ಸತ್ಯೇಂದ್ರ ಜೈನ್
ಹೊಸದಿಲ್ಲಿ, ಜುಲೈ 2: ದೆಹಲಿಯ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಇದೀಗ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಟ್ವಿಟರ್ ಮೂಲಕ ಮಾಹಿತಿ ನೀಡಿರುವ ಸಚಿವರು ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದು, ನಿಮ್ಮೆಲ್ಲರ ಶುಭ ಹಾರೈಕೆಗಳಿಂದ ನಾನು ಬದುಕಿ ಬಂದಿದ್ದೇನೆ ಮತ್ತು ಈಗ ನಾನು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.
ಸಿಎಂ ಕೇಜ್ರಿವಾಲ್ ಅವರ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡುವ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಕ್ರಾಂತಿಕಾರಿಯಾಗಿದ್ದು, ಇದರಿಂದಾಗಿಯೇ ನಾನು ಮರು ಜೀವ ಪಡೆದಿದ್ದೇನೆ. ಹೀಗಾಗಿ ಎಲ್ಲ ಕೊರೊನಾ ಸೋಂಕಿತರು ಗುಣಮುಖರಾದ ನಂತರ ಪ್ಲಾಸ್ಮಾ ದಾನ ಮಾಡಬೇಕು ಎಂದು ಮನವಿ ಮಾಡಿದರು. ಅಷ್ಟೇ ಅಲ್ಲ ತಾನು ಕೂಡ ಪ್ಲಾಸ್ಮಾ ದಾನ ಮಾಡುವುದಾಗಿ ಘೋಷಿಸಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ಲಾಸ್ಮಾ ದಾನ ಮಾಡುವ ಬ್ಯಾಂಕ್ ಸ್ಥಾಪನೆಗೆ ಮುಂದಾಗಿದ್ದು , ಎಎಪಿ ನಾಯಕರು ಪ್ಲಾಸ್ಮಾ ದಾನ ಮಾಡಲು ಮುಂದೆ ಬರಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ ಕೊರೋನಾದಿಂದ ಗುಣಮುಖರಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ಎಎಪಿ ಶಾಸಕ ಅತಿಶಿ ಮತ್ತು ಇತರ ಇಬ್ಬರು ಎಎಪಿ ಜನರು ಪ್ಲಾಸ್ಮಾ ದಾನ ಮಾಡುವುದಾಗಿ ಘೋಷಿಸಿದ್ದಾರೆ.