ಮಡಿಕೇರಿ : ಮುಂದಿನ ತಿಂಗಳು ಸಂಪುಟ ವಿಸ್ತರಣೆ ಆಗಲಿದೆ ಎಂಬ ವದಂತಿ ಹರಿದಾಡುತ್ತಿದ್ದು, ಸಚಿವಾಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿಲೇ ಇದೆ. ಇದೀಗ ಈ ಪಟ್ಟಿಗೆ ಅಪ್ಪಚ್ಚು ರಂಜನ್ ಸೇರ್ಪಡೆಯಾಗಿದ್ದು, ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾಶಯ ವೀಕ್ಷಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ನಾನು ಐದು ಬಾರಿ ಶಾಸಕನಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಇದರಲ್ಲಿ ಅನುಮಾನವೇ ಇಲ್ಲ. ಕಾಯ್ದು ನೋಡುತ್ತೇವೆ. ಯಾರನ್ನು ಸಚಿವರನ್ನಾಗಿ ನೇಮಿಸಬೇಕು ಎನ್ನುವ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಸಿ.ಪಿಯೋಗೇಶ್ವರ್ ಬಗ್ಗೆ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದನ್ನು ಅವರನ್ನೇ ಕೇಳಿ. ಯೋಗೇಶ್ವರ್ ಯಾರ ಜೊತೆ ಹೇಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.