ಬೆಂಗಳೂರು ; ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಮಾಜಿ ಮುಖ್ಯಮಂತ್ರಿ ಹೆಚ್,ಡಿ. ಕುಮಾರಸ್ವಾಮಿ ನಿರಾಕರಿಸಿದ್ದಾರೆ. ಇಂದು ನಡೆದ ಜೆಡಿಎಲ್ ಪಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ನಾಯಕತ್ವದ ಬಗ್ಗೆ ಮಾತನಾಡುವುದಿಲ್ಲ. ಅದು ಅವರ ಪಕ್ಷದ ವಿಚಾರ. ಹಾಗಾಗಿ ನನಗೂ ಅದಕ್ಕೂ ಸಂಬಂಧವಿಲ್ಲ.
ನಾನು ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಬರುವಾಗ ಸಂತೋಷದಿಂದ ಬಿಟ್ಟು ಬಂದಿದ್ದೇನೆ. ಅಲ್ಲದೆ ಅಯೋ ನನ್ನ ಸರ್ಕಾರವನ್ನು ಬಿಜೆಪಿಯವರು ತೆಗೆದು ಬಿಟ್ಟರೂ, ನಾನು ಏನಾದರೂ ಮಾಡಿ ಬಿಜೆಪಿ ಸರ್ಕಾರವನ್ನು ತೆಗಿಯಬೇಕು ಎಂದು ಆಸಕ್ತಿ ಹೊಂದಿಲ್ಲ. ಎಲ್ಲಿ ಲೋಪವಾಗಿದ್ದಿಯೋ ಅದನ್ನು ಸರ್ಕಾರ ಸರಿ ಮಾಡಿಕೊಳ್ಳಬೇಕು.
ಇನ್ನೂ ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಸಹಾಯ ಮಾಡಿದ ಉದ್ಯಮಿ ಉದಯಗೌಡ ಮತ್ತು ಚಿನ್ನಸೋಮ ಎಂಬುವವರು, ಸಿಎಂ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಸಲು ಪ್ರಯತ್ನಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನನಗೆ ಸರ್ಕಾರವನ್ನು ಉರುಳಿಸುವ ಬಗ್ಗೆ ಆಸಕ್ತಿಯಿಲ್ಲ.
ಹಾಗಾಗಿ ನಾನು ಏಕೆ ಸರ್ಕಾರ ಇರುತ್ತೋ, ಬಿಡುತ್ತೋ ಎಂದು ಗಮನ ಕೊಡಬೇಕು ? ನಮ್ಮ ಸರ್ಕಾರವನ್ನು ಉರುಳಿಸಲು ಯಾವ ಸಮಾಜಘಾತಕ ಶಕ್ತಿಗಳ ಕಡೆ ಹಣ ಬಿಜೆಪಿಯವರು ಸಂಗ್ರಹ ಮಾಡಿದ್ದರೂ, ಮಂತ್ರಿಗಳಾಗಬೇಕು, ವಿಧಾನಪರಿಷತ್ ಗೆ ಆಯ್ಕೆ ಆಗಬೇಕು ಎಂದು ಮೈತ್ರಿ ಸರ್ಕಾರವನ್ನು ಉರುಳಿಸಿದ್ದರು. ಇವತ್ತು ಅದೆ ವ್ಯಕ್ತಿಗಳು ಸರಿಯಾದ ಸ್ಥಾನಮಾನ ಸಿಕ್ಕಿಲ್ಲ ಎಂದು ಸರ್ಕಾರದ ವಿರುದ್ದ ತಿರುಗಿ ಬಿದ್ದಿದ್ದಾರೆ.
ಈ ಸಮಯದಲ್ಲಿ ಜನಪ್ರತಿನಿಧಿಗಳಿಗೆ ಹೇಳಬೇಕು. ಸಮಾಜಘಾತಕ ಶಕ್ತಿಗಳನ್ನು ಬಳಸಿ ಅಧಿಕಾರ ಪಡೆಯಬಾರದು. ಇದರಿಂದ ನಾಡಿಗೆ, ಜನಪ್ರತಿನಿಧಿಗಳಿಗೆ ನಷ್ಟವಾಗುತ್ತದೆ ಎಂದು ಕುಮಾರಸ್ವಾಮಿ ಉದ್ಯಮಿಗಳ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.