ಬೆಂಗಳೂರು ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಮತ್ತು ಜನರ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ನೀಡಲು ರಾಜ್ಯ ಸರ್ಕಾರ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಜಾಸೇವೆ ಎಂಬ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸುವುದಾಗಿ ಘೋಷಿಸಿದರು. ಈ ಮೂಲಕ ಆಡಳಿತ ಯಂತ್ರವನ್ನು ಮತ್ತಷ್ಟು ಚುರುಕುಗೊಳಿಸಲು ಸರ್ಕಾರ ಮುಂದಾಗಿದೆ.
ಹೊಸದಾಗಿ ರಚನೆಯಾಗಲಿರುವ ಪ್ರಜಾಸೇವೆ ಇಲಾಖೆಯಲ್ಲಿ ಸಚಿವರು ಮತ್ತು ಹಿರಿಯ ಅಧಿಕಾರಿಗಳು ನೇರವಾಗಿ ಭಾಗಿಯಾಗಲಿದ್ದಾರೆ. ಇದು ಕೇವಲ ಅರ್ಜಿಗಳನ್ನು ಸ್ವೀಕರಿಸುವ ಪೋಸ್ಟ್ ಮನ್ ಕೆಲಸ ಮಾಡದೆ ಸಾರ್ವಜನಿಕರಿಗೆ ನ್ಯಾಯ ಒದಗಿಸುವ ವೇದಿಕೆಯಾಗಲಿದೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಸಚಿವರು ಮತ್ತು ಶಾಸಕರು ವಾರಕ್ಕೊಮ್ಮೆ ಕಡ್ಡಾಯವಾಗಿ ಸ್ಪಂದನಾ ಸಭೆಗಳನ್ನು ನಡೆಸಿ ಜನರ ಕಷ್ಟಗಳನ್ನು ಆಲಿಸಿ ಪರಿಹಾರ ಒದಗಿಸಬೇಕು ಎಂದು ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕಟ್ಟಡ ನಿರ್ಮಾಣ ಪೂರ್ಣಗೊಂಡು ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವ ಮಾಲೀಕರಿಗೆ ಅರ್ಜಿ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಜಿಪಿಎಸ್ ಮತ್ತು ಫೋಟೋ ಕಡ್ಡಾಯಗೊಳಿಸುವ ಮೂಲಕ ಪಾರದರ್ಶಕತೆ ತರಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಐಎಎಸ್ ಮತ್ತು ಐಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಪಡೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 90 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಭವನ 4 ಅನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಶೇ 50 ರಷ್ಟು ಸೀಟುಗಳನ್ನು ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದ ಸಾರಿಗೆ ಸಂಸ್ಥೆಗಳನ್ನು ಉಳಿಸುವ ನಿಟ್ಟಿನಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಬಂದಿದೆ. ಈ ಕುರಿತು ಶೀಘ್ರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಇದರ ಜೊತೆಗೆ ದೆಹಲಿಯಲ್ಲಿರುವ ಕರ್ನಾಟಕ ಸ್ಥಾನಿಕ ಆಯುಕ್ತರ ವ್ಯವಸ್ಥೆಯನ್ನು ಪುನರ್ ರಚಿಸಿ ಕೇಂದ್ರ ಸರ್ಕಾರದ ಅನುದಾನವನ್ನು ಪಡೆಯಲು ವಿಶೇಷ ಒತ್ತು ನೀಡಲಾಗುವುದು ಎಂದು ಅವರು ಹೇಳಿದರು.
ಬಿಡದಿ ಟೌನ್ಶಿಪ್ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಈಗಾಗಲೇ ಅಂತಿಮ ಅಧಿಸೂಚನೆಯಾಗಿರುವ ಭೂಮಿಯನ್ನು ನಾನು ಡಿ ನೋಟಿಫೈ ಮಾಡುವುದಿಲ್ಲ. ಅಂತಹ ಕೆಲಸ ಮಾಡಿ ಮತ್ತೆ ಜೈಲಿಗೆ ಹೋಗಲು ನಾನು ಸಿದ್ಧನಿಲ್ಲ ಎಂದು ಗುಡುಗಿದರು. ಕುಮಾರಸ್ವಾಮಿ ಅವರೇ ಈ ಯೋಜನೆಯ ಪಿತಾಮಹರಾಗಿದ್ದು ಈಗ ರಾಜಕೀಯ ಕಾರಣಕ್ಕಾಗಿ ವಿರೋಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರಿಗೆ ಅತಿ ಹೆಚ್ಚು ಪರಿಹಾರ ನೀಡಲಾಗುತ್ತಿದೆ ಮತ್ತು ಯಾರಿಂದಲೂ ಬಲವಂತವಾಗಿ ಭೂಮಿ ಪಡೆಯುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.








