ಬೊಮ್ಮಾಯಿಗಿಂತ ಹಿರಿಯ ನಾನು | ಅವರಿಗಿಂತ ಹೆಚ್ಚು ಹೋರಾಟದ ಅನುಭವವಿದೆ : ಸಿದ್ದರಾಮಯ್ಯ Saaksha Tv
ಬೆಂಗಳೂರು: ಬೊಮ್ಮಾಯಿ ಏನು ವೇದಾಂತಿನಾ? ಬೊಮ್ಮಾಯಿಗಿಂತ ಹಿರಿಯ ನಾನು ನನಗೆ ಬೊಮ್ಮಾಯಿ ಅವರಿಗಿಂತ ಹೆಚ್ಚು ಹೋರಾಟದ ಅನುಭವವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,. ಬೊಮ್ಮಾಯಿ ಮಾತು ವೇದ ವಾಕ್ಯನಾ? ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನ ನಮಗೆ ಗೊತ್ತಿದೆ. ಅವರಿಗೇನು ಗೊತ್ತಿದೆ ಇದೆಲ್ಲಾ. ಹೀಗಾಗಿ ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನವನ್ನು ಸಹಿಸಿಕೊಳ್ಳಿ ಎಂದು ಅವರು ಹೇಳಿದರೆ ನಾವು ಸಹಿಸಿಕೊಳ್ಳಲು ಸಿದ್ಧರಿಲ್ಲ. ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಹಿಜಾಬ್ ವಿವಾದದ ಕುರಿತು ಮಾತನಾಡಿದ ಅವರು ಸಿಂಧೂರ ಇಡುವುದರಿಂದ ಯಾರಿಗೂ ತೊಂದರೆ ಇಲ್ಲ. ಹಾಗೆಯೇ ಹಿಜಾಬ್ ಧರಿಸುವುದರಿಂದಲೂ ಯಾರಿಗೂ ತೊಂದರೆ ಇಲ್ಲ. ಹಿಂದಿನಿಂದ ನಡೆದುಕೊಂಡು ಬಂದಿರುವ ನಂಬಿಕೆ, ಆಚರಣೆ, ಪರಂಪರೆಗೆ ತಕ್ಕಂತೆ ನಡೆದುಕೊಳ್ಳುವುದು ಯಾರಿಗೂ ತೊಂದರೆ ಇಲ್ಲ. ಯಾವುದೇ ಸಂಸ್ಕೃತಿಯನ್ನು ಬಲವಂತದಿಂದ ತಡೆಯುವುದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ನ್ನು ಹಿಂದಿನಿಂದಲೂ ಧರಿಸಿಕೊಂಡು ಬರುತ್ತಿದ್ದರು. ಕೇಸರಿ ಶಾಲು ಹಿಂದಿನಿಂದ ಯಾರೂ ಹಾಕುತ್ತಿರಲಿಲ್ಲ. ಹಿಜಾಬ್ ಅನ್ನು ವಿರೋಧಿಸುವುದಕ್ಕೋಸ್ಕರವೇ ಕೇಸರಿ ಶಾಲು ಹಾಕಿಸುವುದು ಅತ್ಯಂತ ಸಣ್ಣತನ. ಇದು ಕೇಸರಿ ಶಾಲಿಗೂ ಮಾಡುವ ಅವಮಾನ. ಕೇಸರಿ ಶಾಲನ್ನು ಅಮಾನವೀಯ, ಅನಾಗರಿಕ ಕಾರಣಗಳಿಗೆ ಬಳಸಬಾರದು. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರೆ, ಅವರು ನಮ್ಮ ರಾಷ್ಟ್ರ ಧ್ವಜವನ್ನು ಹಿಡಿದು ಬ್ರಿಟಿಷರ ವಿರುದ್ಧ ಹೋರಾಡಿದ್ದರೆ, ಅವರಿಗೆ ನಮ್ಮ ರಾಷ್ಟ್ರ ಧ್ವಜ ಮತ್ತು ರಾಷ್ಟ್ರೀಯ ಲಾಂಛನಗಳ ಬಗ್ಗೆ ನಿಜವಾದ ಗೌರವ-ಭಕ್ತಿ ಇರುತ್ತಿತ್ತು ಎಂದಿದ್ದಾರೆ.