ನಾನು ರಾಜಕೀಯಕ್ಕೆ ಬರಲ್ಲ : ತಲೈವಾ ಸ್ಪಷ್ಟನೆ
ಚೆನ್ನೈ : ನನಗೆ ರಾಜಕೀಯಕ್ಕೆ ಬರುವ ಆಸೆ ಇಲ್ಲ. ಭವಿಷ್ಯದಲ್ಲಿ ರಾಜಕೀಯ ಪ್ರವೇಶಿಸುವ ಯೋಜನೆ ನನ್ನಲ್ಲಿಲ್ಲ ಎಂದು ತಲೈವಾ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ರಜನಿ ಮಕ್ಕಳ್ ಮಂಡ್ರಂ ಸಂಘಟನೆಯನ್ನು ವಿಸರ್ಜಿಸುವುದಾಗಿ ಹೇಳಿದ್ದಾರೆ. ಈ ಮೂಲಕ ನಟ ರಜನಿಕಾಂತ್ ಚುನಾವಣೆಯಲ್ಲಿ ಸ್ಪರ್ಧಿಸಿ ರಾಜಕೀಯ ಬರುವ ಆಸೆಯನ್ನು ಕೈ ಬಿಟ್ಟಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ರಂಗಪ್ರವೇಶ ಮಾಡಲು ಈ ಹಿಂದೆ ಆರ್‍ಎಂಎಂ ಪಕ್ಷವನ್ನು ಸ್ಥಾಪಿಸಿದ್ದರು. ಆದ್ರೆ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಕೀಯಕ್ಕೆ ಬರುವ ಯೋಚನೆಯಿಂದ ರಜಿನಿ ಹಿಂದೆ ಸರಿದಿದ್ದಾರೆ.
2017ರಲ್ಲಿ ಸ್ವಂತ ಪಕ್ಷ ಕಟ್ಟಿದ್ದ ರಜಿನಿ ರಾಜಕೀಯದಲ್ಲಿ ಬದಲಾವಣೆ ತರುವುದಾಗಿ ತಿಳಿಸಿದ್ದರು. ಆದರೆ ನಂತರ ಈ ಬಗ್ಗೆ ಹೆಚ್ಚಿನ ವಿವರ ಸಿಕ್ಕಿರಲಿಲ್ಲ.
ಕಳೆದ ವರ್ಷ ಡಿಸೆಂಬರ್ ನಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದ್ದರು. ಆದ್ರೆ ಅಣ್ಣಾತೈ ಸಿನಿಮಾ ಶೂಟಿಂಗ್ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದರು.
ಈ ವೇಳೆ ಅವರು ರಾಜಕೀಯಕ್ಕೆ ಬರದಿರಲು ನಿರ್ಧರಿಸಿದ್ದಾರೆ ಎಂಬ ಗಾಳಿ ಸುದ್ದಿಯೂ ಹರಿದಾಡಿತ್ತು. ಇದೀಗ ಅವರೇ ಈ ಕುರಿತು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.