ಬೆಂಗಳೂರು : ‘ಅಣ್ಣಾಮಲೈ ಬಿಜೆಪಿ ಸೇರ್ಪಡೆ ವಿಚಾರ ನನಗೇ ಗೊತ್ತಿಲ್ಲ’ ಎಂಬ ಸಿಎಂ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಅಣ್ಣಾಮಲೈ ಕೇಸರಿ ಪಡೆ ಸೇರುವ ಬಗ್ಗೆ ಕಮಲ ನಾಯಕರಲ್ಲೇ ಒಮ್ಮತ ಅಭಿಪ್ರಾಯ ಇಲ್ವಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಇಂದು ದೆಹಲಿಯಲ್ಲಿ ಬಿಜೆಪಿ ಸೇರಲಿದ್ದಾರೆ. ಅಣ್ಣಮಲೈ ಅವರು ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಜೊತೆಗೆ ಖಡಕ್ ಅಧಿಕಾರಿ ಎಂದು ಹೆಸರು ಮಾಡಿದ್ದರು. ಕುಟುಂಬದೊಂದಿಗೆ ಕಾಲ ಕಳೆಯಲು ಆಗುತ್ತಿಲ್ಲ ಎಂದು ಹೇಳಿಕೆ ಕೊಟ್ಟು ಕಳೆದ ವರ್ಷ ಸ್ವಯಂ ನಿವೃತ್ತಿಯನ್ನು ಅವರು ತೆಗೆದುಕೊಂಡಿದ್ದರು.
ಅಣ್ಣಮಲೈ ಬಿಜೆಪಿಗೆ ಸೇರುವ ಬಗ್ಗೆ ವೈದ್ಯಕೀಯ ಸಚಿವ ಸುಧಾಕರ್ ಟ್ವೀಟ್ ಮಾಡಿ, ಅಣ್ಣಮಲೈ ಅವರು ಬಿಜೆಪಿ ಸೇರುತ್ತಿರುವುದು ನನಗೆ ಅತೀವ ಸಂತೋಷ ತಂದಿದೆ. ಅವರಿಗೆ ಹೃದಯಪೂರ್ವಕ ಸ್ವಾಗತ ಎಂದು ಬರೆದುಕೊಂಡಿದ್ದಾರೆ.
ಇದೇ ವಿಚಾರಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟಿರುವ ಸಿಎಂ ಯಡಿಯೂರಪ್ಪ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರ್ಪಡೆ ವಿಚಾರ ನನಗೇ ಗೊತ್ತಿಲ್ಲ ಎಂದಿದ್ದಾರೆ.
ಹೀಗಾಗಿ ಸಿಎಂ ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಬಿಜೆಪಿ ಹೈಕಮಾಂಡ್ ಅಣ್ಣಾಮಲೈ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ಯಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.









