ನನಗೆ ಸಿಎಂ ಆಗುವ ತಾಕತ್ತು ಇತ್ತು : ಯತ್ನಾಳ್
ವಿಜಯಪುರ : ನನಗೆ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡುವ ತಾಕತ್ತು ಇತ್ತು, ಆದ್ರೆ ಪಕ್ಷ ನನ್ನನ್ನು ಸದುಪಯೋಗ ಮಾಡಿಕೊಳ್ಳುತ್ತಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಅಲ್ಲದೆ ಬಿಜೆಪಿ ನನ್ನ ಸದುಪಯೋಗ ಮಾಡಿಕೊಂಡರೆ ಮುಂದಿನ ಬಾರಿ ರಾಜ್ಯದಲ್ಲಿ 150 ಸ್ಥಾನಗಳು ಬರುತ್ತವೆ ಎಂದು ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ರಾಜ್ಯದ ಸಿಎಂ ಆಗುವ ತಾಕತ್ತು ಇತ್ತು. ಆದ್ರೆ ಯಾರೋ ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಅಡತಡೆ ಮಾಡಿದರು, ಅವರ ರಾಜಕೀಯ ಭವಿಷ್ಯ ಈಗಾಗಲೇ ಮುಗಿದಿದೆ. ಪಾಪ ಅವರು ವಿಶ್ರಾಂತಿ ತೆಗೆದುಕೊಳ್ಳಲಿ, ಮೊಮ್ಮಕ್ಕಳನ್ನು ಆಟ ಆಡಿಸುತ್ತಾ ಮನೆಯಲ್ಲಿರಲಿ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡ್ಡಿಯೂರಪ್ಪಗೆ ಟಾಂಗ್ ನೀಡಿದರು.
ಸಚಿವ ಸಂಪುಟ ಬಗ್ಗೆ ಮಾತನಾಡಿ, ವಿಜಯಪುರಕ್ಕೆ ಈ ಬಾರಿ ಸಚಿವ ಸಂಪುಟದಲ್ಲಿ ಅನ್ಯಾಯ ಆಗಲ್ಲ, ಯಡ್ಡಿಯೂರಪ್ಪನವರ ಮನೆಯಲ್ಲಿ ಈಗಾಗಲೇ ಒಬ್ಬರು ಇದ್ದಾರೆ. ಎಷ್ಟು ಜನರಿಗೆ ಅಂತಾ ಸರ್ಕಾರದಲ್ಲಿ ಹುದ್ದೆ ಕೊಡುವುದು. ಒಂದು ಮನೆಯಲ್ಲಿ ಎಷ್ಟು ಜನ ಎಂಎಲ್ಎ, ಎಂಪಿ ಆಗಬೇಕು ಎಂದು ಬಿಎಸ್ ವೈ ವಿರುದ್ಧ ವಾಗ್ದಾಳಿ ಮುಂದುವರೆಸಿದ ಯತ್ನಾಳ್, ಬಿಜೆಪಿ ಹೈಕಮಾಂಡ್ ಗೆ ಎಲ್ಲ ಗೊತ್ತಿದೆ. ಈ ಅನುವಂಶಿಕವನ್ನು ಮುಂದುವರೆಸಬಾರದೆಂದು ಯಡ್ಡಿಯೂರಪ್ಪರನ್ನು ಕೆಳಗಿಳಿಸಿ, ಬಸವರಾಜ ಬೊಮ್ಮಾಯಿರನ್ನು ಸಿಎಂ ಮಾಡಿದ್ದಾರೆ. ಅವರಿಗೂ ಬೆನ್ನಿಗೆ ಚೂರಿ ಹಾಕದೆ ಇದ್ದರೆ ಸಾಕು ಎಂದು ಕಿಡಿಕಾರಿದರು.
ಮುಂದುವರೆದು ಮಾತನಾಡಿ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಎಂದ ಯತ್ನಾಳ್, ಬಿಜೆಪಿ ಹೈಕಮಾಂಡ್ ಸಚಿವ ಸ್ಥಾನ ನೀಡಿದರೆ ನಿಭಾಯಿಸುವ ಸಾಮಥ್ರ್ಯ ಹೊಂದಿದ್ದೇನೆ ಎಂದು ಪರೋಕ್ಷವಾಗಿ ಸಚಿವ ಸ್ಥಾನದ ಆಕಾಂಕ್ಷಿ ಎಂದು ತಿಳಿಸಿದರು.








