ಸಚಿವ ಎಮ್. ಬಿ. ಪಾಟೀಲ್ ಅವರು ತಮ್ಮ ರಾಜಕೀಯ ಜೀವನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಮಗೆ ಎರಡು ಬಾರಿ KPCC ಅಧ್ಯಕ್ಷ ಸ್ಥಾನಕ್ಕೆ ಅವಕಾಶ ಬಂದಿತ್ತು ಎಂದು ತಿಳಿಸಿದ್ದಾರೆ..
ಕಾಂಗ್ರೆಸ್ ಪಕ್ಷ ನನಗೆ ಸಾಕಷ್ಟು ಅವಕಾಶಗಳನ್ನು ನೀಡಿದೆ. KPCC ಅಧ್ಯಕ್ಷ ಸ್ಥಾನ ಬೇಕು ಅಂದರೆ ಮಾಧ್ಯಮದ ಮುಂದೆ ಹೇಳುವುದಕ್ಕಿಂತ, ಹೈಕಮಾಂಡ್ ಮುಂದೆ ಹೇಳಬೇಕು. ನಾನೂ ಅದೇ ರೀತಿಯಲ್ಲಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇನೆ, ಎಂದು ಅವರು ಹೇಳಿದ್ದಾರೆ.
ಪಕ್ಷದ ಹಿರಿಯ ನಾಯಕರು ಚರ್ಚೆ ನಡೆಸುವಾಗ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಾಗಿ ಹೇಳಿದ ಅವರು, ಎರಡು ಬಾರಿ ಅಧ್ಯಕ್ಷ ಸ್ಥಾನ ಸಿಗುವ ಅವಕಾಶ ಬಂದಿತ್ತು. ಆದರೆ ಆ ಸಂದರ್ಭಗಳಲ್ಲಿ ನಾನು ಸಚಿವ ಸ್ಥಾನದಲ್ಲಿದ್ದ ಕಾರಣ, ಅದು ಸಾಧ್ಯವಾಗಲಿಲ್ಲ, ಎಂದು ಸ್ಪಷ್ಟಪಡಿಸಿದರು.
ಈ ಹೇಳಿಕೆ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಒಳರಾಜಕೀಯ ಬೆಳವಣಿಗೆಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.







