ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಜಾರಿಯಲ್ಲಿರುವ ಉಚಿತ ಗ್ಯಾರಂಟಿ ಯೋಜನೆಗಳು ಹಾಗೂ ಅವುಗಳಿಂದ ಉಂಟಾಗುತ್ತಿರುವ ಆರ್ಥಿಕ ಹೊರೆಯ ಬಗ್ಗೆ ಕೇಂದ್ರ ಸರ್ಕಾರ ಈಗ ಅತ್ಯಂತ ಗಂಭೀರ ಎಚ್ಚರಿಕೆಯನ್ನು ನೀಡಿದೆ. ಕರ್ನಾಟಕ ಸೇರಿದಂತೆ ಒಟ್ಟು 9 ರಾಜ್ಯಗಳು ಭವಿಷ್ಯದಲ್ಲಿ ತೀವ್ರ ಹಣಕಾಸಿನ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ತನ್ನ ಏಪ್ರಿಲ್ ತಿಂಗಳ ಮಾಸಿಕ ಆರ್ಥಿಕ ವಿಮರ್ಶಾ ವರದಿಯಲ್ಲಿ ಎಚ್ಚರಿಸಿದೆ.
ಕೇಂದ್ರದ ಎಚ್ಚರಿಕೆಯ ಹಿಂದಿರುವ ಅಸಲಿ ಕಾರಣವೇನು?
ರಾಜ್ಯ ಸರ್ಕಾರಗಳು ಜನಪ್ರಿಯತೆಗಾಗಿ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯಗಳ ಆದಾಯಕ್ಕಿಂತ ಖರ್ಚು ಮಿತಿ ಮೀರುತ್ತಿದೆ. ಈ ಕುರಿತು ಪತ್ರ ಬರೆದಿರುವ ಕೇಂದ್ರ ಹಣಕಾಸು ಸಚಿವಾಲಯವು, ರಾಜ್ಯಗಳು ಅತಿಯಾದ ಸಾಲದ ಹೊರೆ ಮತ್ತು ಆದಾಯದ ಕೊರತೆಯನ್ನು ಎದುರಿಸುತ್ತಿವೆ. ಇದು ಮುಂದಿನ ದಿನಗಳಲ್ಲಿ ಮಧ್ಯಪ್ರಾಚ್ಯ ಬಿಕ್ಕಟ್ಟಿನಂತಹ ಜಾಗತಿಕ ಆರ್ಥಿಕ ಆಘಾತಗಳು ಸಂಭವಿಸಿದರೆ, ಅದನ್ನು ಎದುರಿಸುವ ರಾಜ್ಯಗಳ ಸಾಮರ್ಥ್ಯವನ್ನು ಕುಂದಿಸಲಿದೆ ಎಂದು ತಿಳಿಸಿದೆ.
ಅಭಿವೃದ್ಧಿ ಕೆಲಸಗಳಿಗೆ ಹಣದ ಕೊರತೆ ಭೀತಿ
ರಾಜ್ಯಗಳ ಆದಾಯದಲ್ಲಿ ಗಣನೀಯ ಪ್ರಮಾಣದ ಹಣವು ಕೇವಲ ಸಾಲದ ಬಡ್ಡಿ ಪಾವತಿ, ಸರ್ಕಾರಿ ನೌಕರರ ಸಂಬಳ, ಪಿಂಚಣಿ ಮತ್ತು ಸಬ್ಸಿಡಿಗಳಿಗೇ ವ್ಯಯವಾಗುತ್ತಿದೆ. ಸಂಗ್ರಹವಾಗುವ ಒಟ್ಟು ಆದಾಯದ ಪೈಕಿ ಸುಮಾರು ಶೇಕಡಾ 15ರಷ್ಟು ಹಣ ಕೇವಲ ಬಡ್ಡಿ ಕಟ್ಟಲು ಬಳಕೆಯಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇದರಿಂದಾಗಿ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯದಂತಹ ಆದ್ಯತಾ ವಲಯಗಳಿಗೆ ಹಣ ವಿನಿಯೋಗಿಸಲು ರಾಜ್ಯಗಳಿಗೆ ಸಾಧ್ಯವಾಗುತ್ತಿಲ್ಲ.
ಸಂಕಷ್ಟದಲ್ಲಿರುವ ಆ 9 ರಾಜ್ಯಗಳು ಯಾವುವು?
ಕೇಂದ್ರ ಸರ್ಕಾರದ ವರದಿಯ ಪ್ರಕಾರ, 2026-27ನೇ ಸಾಲಿನ ವೇಳೆಗೆ ಈ ಕೆಳಗಿನ ರಾಜ್ಯಗಳು ಹೆಚ್ಚಿನ ಆದಾಯ ಕೊರತೆಯನ್ನು ಅನುಭವಿಸಲಿವೆ:
1. ಹಿಮಾಚಲ ಪ್ರದೇಶ: ಶೇಕಡಾ -2.4
2. ಪಂಜಾಬ್: ಶೇಕಡಾ -2.2
3. ಕೇರಳ: ಶೇಕಡಾ -2.1
4. ಆಂಧ್ರಪ್ರದೇಶ: ಶೇಕಡಾ -1.1
5. ರಾಜಸ್ಥಾನ: ಶೇಕಡಾ -1.1
6. ಹರ್ಯಾಣ: ಶೇಕಡಾ -0.9
7. ಕರ್ನಾಟಕ: ಶೇಕಡಾ -0.7
8. ಮಹಾರಾಷ್ಟ್ರ: ಶೇಕಡಾ -0.7
9. ಛತ್ತೀಸ್‌ಗಢ: ಶೇಕಡಾ -0.3
ಕೇಂದ್ರದಿಂದ ಸಿಗಲ್ಲವೇ ಹಣಕಾಸಿನ ನೆರವು?
ವಿಶೇಷವೆಂದರೆ, ಒಂದು ಕಡೆ ಕೇಂದ್ರ ಸರ್ಕಾರ ತನ್ನ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ರಾಜ್ಯಗಳು ಉಚಿತ ಯೋಜನೆಗಳಿಗಾಗಿ ಸಾಲದ ಸುಳಿಗೆ ಸಿಲುಕುತ್ತಿವೆ. ಒಂದು ವೇಳೆ ರಾಜ್ಯಗಳು ಹಣಕಾಸಿನ ತುರ್ತು ಪರಿಸ್ಥಿತಿಗೆ ಸಿಲುಕಿ ಕೇಂದ್ರದ ಮೊರೆ ಹೋದರೆ, ಸಹಾಯ ಮಾಡುವುದು ಕಷ್ಟ ಎಂಬ ಪರೋಕ್ಷ ಸಂದೇಶವನ್ನು ಈ ಪತ್ರದ ಮೂಲಕ ರವಾನಿಸಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಈಗಾಗಲೇ ಗ್ಯಾರಂಟಿ ಯೋಜನೆಗಳಿಂದ ರಾಜ್ಯಗಳ ಆರ್ಥಿಕ ಸ್ಥಿತಿ ಹದಗೆಡುತ್ತಿರುವ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದು, ಈಗ ಕೇಂದ್ರದ ಈ ನಡೆ ರಾಜ್ಯ ಸರ್ಕಾರಗಳಲ್ಲಿ ಸಂಚಲನ ಮೂಡಿಸಿದೆ.







