ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಒಂದು ವರ್ಷ ಪೂರ್ಣವಾಗಿದ್ದು, ಮುಖ್ಯಮಂತ್ರಿಯಾಗಿ ಲಕ್ಷ್ಮಣ ಸವದಿ ಬದಲಾಗಲಿದ್ದಾರೆ ಎನ್ನುವ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸ್ವತಃ ಡಿಸಿಎಂ ಲಕ್ಷ್ಮಣ ಸವದಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವರ ಭೇಟಿ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಅನುಮತಿ ಪಡೆದೇ ದೆಹಲಿಗೆ ಆಗಮಿಸಿದ್ದೇನೆ. ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಡೆಸಿಲ್ಲ. ಹಿರಿಯ ನಾಯಕರನ್ನು ಭೇಟಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡ್ಕೇರ್ ಭೇಟಿಗೆ ಸಮಯ ಕೋರಿದೆ. ರಾಜ್ಯದಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ತರುವ ಬಗ್ಗೆ ಮಾತುಕತೆ ನಡೆಸಬೇಕಿದೆ. ಹೀಗಾಗಿ ಇಬ್ಬರು ಸಚಿವರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚೆ ಮಾಡುತ್ತೇನೆ. ನಾನು ಸಿಎಂ ಒಪ್ಪಿಗೆ ಪಡೆದೇ ದೆಹಲಿಗೆ ಬಂದಿದ್ದು, ಇದಕ್ಕೆ ರೆಕ್ಕೆ ಕಟ್ಟುವ ಅವಶ್ಯಕತೆ ಇಲ್ಲ ಎಂದು ವದಂತಿಗಳಿಗೆ ಸವದಿ ಫುಲ್ ಸ್ಟಾಪ್ ಇಟ್ಟರು.
ಇದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಸವದಿ, ಸಂಪುಟ ವಿಸ್ತರಣೆ, ಪುನಾರಚನೆ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ಇದೆ. ಅವರು ಸಂಪುಟ ಪುನಾರಚನೆ, ವಿಸ್ತರಣೆ ಏನಾದರೂ ಮಾಡಲಿ ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟಿದ್ದು ಎಂದರು.








