ನಾನು ಮಠ ಕಟ್ಟಿಲ್ಲ, ಸಮಾಜ ಕಟ್ಟಿದ್ದೇನೆ : ಕೂಡಲಸಂಗಮ ಶ್ರೀ
ಬೆಂಗಳೂರು : ಮಠ ಕಟ್ಟಿದವರು ಇತಿಹಾಸದಲ್ಲಿ ಉಳಿಯಲ್ಲ, ಸಮಾಜ ಕಟ್ಟಿದವರು ಉಳಿಯಲಿದ್ದಾರೆ ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟದ ಪಾದಯಾತ್ರೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ನಮ್ಮ ತಂದೆ, ತಾಯಿ ಋಣ ತೀರಿಸಲು ಸಾಧ್ಯವಾಗಲಿಲ್ಲ.
ಬಾಲ್ಯದಲ್ಲೇ ಮಠ ಸೇರಿದೆ. ಆದರೆ ಇಂದು ಪಾದಯಾತ್ರೆ ಮೂಲಕ ಸಮಾಜದ ಋಣ ತೀರಿಸುವ ಪ್ರಯತ್ನ ಮಾಡಿದ್ದೇವೆ. ಸಮಾಜವೇ ತಂದೆ-ತಾಯಿ ಆಗಿದೆ. ಈ ಮೂಲಕ ನಾನು ಸಮಾಜದ ಋಣ ತೀರಿಸುತ್ತಿದ್ದೇನೆ ಎಂದು ಹೇಳಿದ್ರು.
ಇನ್ನು ಪಾದಯಾತ್ರೆಯಲ್ಲಿ ಯಾರಿಗೂ ಯಾವುದೇ ತೊಂದರೆ ಆಗದಂತೆ ನಡೆದಿದೆ. ಕೇವಲ ಪಂಚಮಸಾಲಿ ಸಮಾಜಕ್ಕೆ ಸೀಮಿತವಾಗಿ ಪಾದಯಾತ್ರೆ ಮಾಡಲಿಲ್ಲ, ಸಾಮಾಜಿಕ ನ್ಯಾಯಕ್ಕಾಗಿ ಪಾದಯಾತ್ರೆ ಮಾಡಿದ್ದೇವೆ.
2ಎ ಮೀಸಲಾತಿ ಸಿಗದ ಹೊರತು ಮಠಕ್ಕೆ ಮರಳಲ್ಲ ಎಂದು ಹೇಳಿದ ಶ್ರೀಗಳು, ಸರ್ಕಾರದವರು ಏನು ಸುದ್ದಿ ಕೊಡಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಹಿಂದೆ ದೇವೇಗೌಡರು ಸಿಎಂ ಆಗಿದ್ದಾಗ ಆ ಸಮುದಾಯದಕ್ಕೆ ನ್ಯಾಯ ಕೊಟ್ಟಿದ್ದರು.
ಅರಸು ಹಲವು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿದ್ದರು. ಹಾಗಾಗಿ ಈಗ ನಾನು ಯಡಿಯೂರಪ್ಪನವರಿಂದ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇನ್ನು ನಾನು ಸಮಾಜ ಕಟ್ಟಿದ್ದೇನೆ, ನೀವು ಮಠ ಕಟ್ಟಿ ಎಂದು ಅಲ್ಲಿ ನೆರೆದಿದ್ದ ಜನರಿಗೆ ಕರೆ ಕೊಟ್ಟ ಶ್ರೀಗಳು ಜುಲೈ 23 ರಿಂದ ಅಕ್ಟೋಬರ್ 23ರವರೆಗೆ ರಥಯಾತ್ರೆ ಮಾಡಲಿದ್ದೇವೆ.
ಜೋಳಿಗೆ ಹಿಡಿದು ಹಳ್ಳಿ ಹಳ್ಳಿಗೆ ಬರಲಿದ್ದೇನೆ. ನೀವೇ ಹಣ ನೀಡಿ ಮಠ ಕಟ್ಟಬೇಕು, ಮಠ ಕಟ್ಟಿದವರು ಇತಿಹಾಸದಲ್ಲಿ ಉಳಿಯಲ್ಲ, ಸಮಾಜ ಕಟ್ಟಿದವರು ಉಳಿಯಲಿದ್ದಾರೆ ಎಂದು ತಿಳಿಸಿದರು.
