ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ನಾನು ವೈದ್ಯಕೀಯ ಸಚಿವನಾಗಿದ್ದೆ. ಆದರೆ, ಆ ವೇಳೆ ಯಾವುದೇ ರೀತಿಯ ಕಾನೂನು ಬಾಹಿರ ಕೆಲಸ ಮಾಡಲಿಲ್ಲ. ಅಂತಃಕರಣದಿಂದ ಕೆಲಸ ಮಾಡಿದ್ದೇನೆ ಎಂದು ಚಿಕ್ಕಬಳ್ಳಾಪುರ ಸಂಸದ ಹಾಗೂ ಮಾಜಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ (Dr. K.Sudhakar) ಹೇಳಿದ್ದಾರೆ.
ಕೋವಿಡ್ ಹಗರಣಗಳ (Covid Scam)ಗೆ ಸಂಬಂಧಿಸಿದ ಮೈಕೆಲ್ ಡಿ. ಕುನ್ಹಾ ನೇತೃತ್ವದ ಆಯೋಗದ ಮಧ್ಯಂತರ ವರದಿ ಸರ್ಕಾರದ ಕೈ ಸೇರಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನವರು ಸೇರಿ ಗುಣಾಕಾರ-ಭಾಗಾಕಾರ ಲೆಕ್ಕ ಮಾಡಿದ್ದಾರೆ. ನಾನು ಕೋವಿಡ್ ಕಾಲದಲ್ಲಿ ವೈದ್ಯಕೀಯ ಸಚಿವನಾಗಿದ್ದೆ. ಆ ವೇಳೆ ಅತಃಕರಣದಿಂದ ಕೆಲಸ ಮಾಡಿದ್ದೇನೆ. ನಾನು ಯಾವುದೇ ಕಾನೂನು ಬಾಹಿರ ಕೆಲಸ ಮಾಡಿಲ್ಲ ಎಂದು ಹೇಳಿದ್ದಾರೆ.
ಯಡಿಯೂರಪ್ಪ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿತ್ತು. ಯಾವುದೇ ತೀರ್ಮಾನ ಇದ್ದರೂ ಟಾಸ್ಕ್ ಮೂಲಕ ತೆಗೆದುಕೊಳ್ಳುತ್ತಿದ್ದೆವು. ಹಿರಿಯ ಅಧಿಕಾರಿಗಳು, ತಜ್ಞರು ಅದರಲ್ಲಿದ್ದರು. ಆಗ ವೈದ್ಯಕೀಯ ತುರ್ತುಪರಿಸ್ಥಿತಿ ಇತ್ತು. ಈಗ ಇವರು ಇವತ್ತಿನ ದರ ಆಧರಿಸಿ ಲೆಕ್ಕ ಹಾಕಿದ್ದಾರಂತೆ. ಊಹಾಪೋಹಗಳಿಗೆ ನಾನು ಉತ್ತರ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನವರು ಏನು ಸತ್ಯ ಹರಿಶ್ಚಂದ್ರರಾ? ಇವರ ಸರ್ಕಾರ ದರೋಡೆಕೋರರ ಸರ್ಕಾರ. ಎಲ್ಲ ಇಲಾಖೆಗಳಲ್ಲಿಯೂ ಅಕ್ರಮ ನಡೆದಿದೆ ಎಂದು ಕಿಡಿಕಾರಿದ್ದಾರೆ.