ರಾಮನಗರ: ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ವಿಪ ಸದಸ್ಯ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ನನಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ (CN Manjunath) ಕೂಡ ನನ್ನ ಪರ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಆಶೀರ್ವಾದ ಯಾವಾಗಲೂ ನನ್ನ ಜೊತೆ ಇರುತ್ತದೆ. ಅವರ ಮೇಲೆ ನನಗೆ ಸದಾ ಗೌರವ ಇದೆ. ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂದಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಐದು ಪಂಚಾಯ್ತಿ ವ್ಯಾಪ್ತಿಯ ಪ್ರಮುಖರ ಸಭೆ ಮಾಡಿದ್ದೇನೆ. ಬೆಳಗ್ಗೆ ಟೌನ್ ವ್ಯಾಪ್ತಿಯ ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಬುಧವಾರದಿಂದ ಹಳ್ಳಿಗಳಿಗೆ ತೆರಳಿ ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹಿಸುತ್ತೇನೆ. ಜನ ನನಗೆ ಸೂಕ್ತ ಸ್ಪಂದನೆ ನೀಡುತ್ತಿದ್ದಾರೆ. ಎನ್‌ಡಿಎ (NDA) ಅಭ್ಯರ್ಥಿ ಆಗಿ ನಾನು ಬರುತ್ತೇನೆ. ಆಶೀರ್ವಾದ ಮಾಡಿ ಎಂದು ಕೇಳುತ್ತಿದ್ದೇನೆ. ಇದಕ್ಕೆ ಜನರ ಆಶೀರ್ವಾದ ಕೂಡ ಇದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಿಂದ ದುಡ್ಡು ಕೊಟ್ಟು ಮುಖಂಡರನ್ನು ಸೆಳೆಯುವಂತಹ ಕೆಲಸವಾಗುತ್ತಿದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ನಗರಸಭೆ ಸದಸ್ಯರನ್ನು ಕಾಂಗ್ರೆಸ್ ಸೆಳೆದಿದೆ. ಆದರೆ, ಈ ಬಾರಿ ಮತದಾರರು ನನ್ನ ಹಿಂದೆ ಇದ್ದಾರೆ. ನಾನು ಗೆದ್ದೆ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.