ಎಮ್ಎಸ್ ಧೋನಿಯವರನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ – ಕುಲದೀಪ್ ಯಾದವ್
ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದ ಬಗ್ಗೆ ಹೇಳುವುದೇ ಬೇಡ. ಇನ್ನು ತಂಡದ ವಿಕೆಟ್ ಕೀಪರ್ ಆಗಿಯೂ ಧೋನಿ ತಂಡಕ್ಕೆ ಎಷ್ಟು ಆಧಾರವಾಗಿದ್ದರು ಎಂಬುದನ್ನು ಕೂಡ ಪದೇ ಪದೇ ಹೇಳಬೇಕಾಗಿಲ್ಲ. ಪಂದ್ಯದ ಗತಿಯನ್ನು ಕ್ಷಣ ಮಾತ್ರದಲ್ಲೇ ಅರಿತುಕೊಳ್ಳುವ ಧೋನಿ ಸ್ಪಿನ್ನರ್ಗಳ ಪಾಲಿಗಂತೂ ದೊಡ್ಡಣ್ಣನೇ ಸರಿ. ಅದೇ ರೀತಿ ಯಾವ ಬ್ಯಾಟ್ಸ್ ಮೆನ್ ಯಾವ ರೀತಿ ಆಡ್ತಾನೆ… ಹೇಗೆ ಬೌಲಿಂಗ್ ಮಾಡಬೇಕು.. ಯಾವ ರೀತಿ ಫೀಲ್ಡಿಂಗ್ ಸೆಟ್ ಮಾಡಿಕೊಳ್ಳಬೇಕು ಎಂಬುದರಲ್ಲೂ ಧೋನಿ ಚಾಣಕ್ಯನೇ.
ಅಂತಹ ಧೋನಿ ಕಳೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದ ನಂತರ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಐಪಿಎಲ್ ನಲ್ಲಿ ಆಡಲು ಸಿದ್ಧರಾಗುತ್ತಿರುವಾಗಲೇ ಕೋವಿಡ್-19 ಅಡ್ಡಿಯನ್ನುಂಟು ಮಾಡಿದೆ. ಅದೇ ರೀತಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯೂ ತೂಗೂಯ್ಯಾಲೆಯಲ್ಲಿದೆ.
ಇದೀಗ ಟೀಮ್ ಇಂಡಿಯಾದ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಧೋನಿಯ ಅನುಪಸ್ಥಿತಿ ಕಾಡುತ್ತಿದೆ. ಈ ಹಿಂದೆ ಧೋನಿ ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಅವರಿಗೆ ಯಾವ ರೀತಿ ಸಲಹೆ -ಸೂಚನೆಗಳನ್ನು ನೀಡಿದ್ದಾರೆ ಎಂಬುದನ್ನು ನೋಡಿದ್ದೇವೆ. ಅದೇ ರೀತಿ ಕುಲದೀಪ್ ಯಾದವ್ ಕೆಲವೊಂದು ಬಾರಿ ಧೋನಿಯ ಮಾತುಗಳನ್ನು ಕೇಳದೇ ಇದ್ದಾಗಲೂ ಯಾವ ರೀತಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬುದು ಸಹ ಗೊತ್ತಿರುವ ವಿಚಾರವೇ.
ಅದೇನೇ ಇರಲಿ, ಇದೀಗ ಕುಲದೀಪ್ ಯಾದವ್ ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ. ಧೋನಿ ತಂಡದಲ್ಲಿರುವಾಗ ಕುಲದೀಪ್ ಯಾದವ್ಗೆ ಬೌಲಿಂಗ್ ಮಾಡುವಾಗ ಯಾವುದೇ ಒತ್ತಡಗಳು ಇರುತ್ತಿರಲಿಲ್ಲವಂತೆ, ಧೋನಿ ಯಾವ ರೀತಿ ಬೌಲಿಂಗ್ ಮಾಡಬೇಕು ಎಂಬುದರ ಬಗ್ಗೆ ಸಲಹೆಗಳನ್ನು ನೀಡುತ್ತಿದ್ರಂತೆ. ಅದೇ ರೀತಿ ಬೌಲಿಂಗ್ ಮಾಡುವಾಗ ಫೀಲ್ಡಿಂಗ್ ಸೆಟ್ ಬಗ್ಗೆಯೂ ಕುಲದೀಪ್ ಯಾದವ್ ತಲೆಕೆಡಿಸಿಕೊಳ್ಳುತ್ತಿರಲಿಲ್ಲವಂತೆ. ಹೀಗಾಗಿ ಕುಲದೀಪ್ ಯಾದವ್ ಪಾಲಿಗೆ ಧೋನಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದ್ದಾರೆ ಎಂಬುದನ್ನೆಲ್ಲಾ ಯಾದವ್ ಹೇಳಿಕೊಂಡಿದ್ದಾರೆ.
ನಾನು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಲು ಶುರು ಮಾಡಿದ್ದಾಗ ಪಿಚ್ ಅನ್ನು ಅರಿತುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ಧೋನಿಯವರ ಜೊತೆ ಆಡಲು ಶುರು ಮಾಡಿದಾಗಿನಿಂದ ನಾನು ಸಾಕಷ್ಟು ಕಲಿತುಕೊಂಡಿದ್ದೇನೆ. ಯಾವ ರೀತಿ ಸ್ಪಿನ್ ಮಾಡಬೇಕು. ಪಿಚ್ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಧೋನಿ ಸಲಹೆ ಹಾಗೂ ಮಾರ್ಗದರ್ಶನಗಳನ್ನು ನೀಡುತ್ತಿದ್ದರು ಎಂದು ಕುಲದೀಪ್ ಯಾದವ್ ಹೇಳಿಕೊಂಡಿದ್ದಾರೆ.
ಇನ್ನು ಧೋನಿ ತುಂಬಾ ಚೆನ್ನಾಗಿ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದರು. ಆದ್ರಿಂದ ನಾನು ಬೌಲಿಂಗ್ ಮಾಡುತ್ತಿರುವಾಗ ಫಿಲ್ಡಿಂಗ್ ಸೆಟ್ ಬಗ್ಗೆ ತಲೆನೇ ಕೆಡಿಸಿಕೊಳ್ಳುತ್ತಿರಲಿಲ್ಲ. ಯಾಕಂದ್ರೆ ಧೋನಿಯೇ ಫಿಲ್ಡಿಂಗ್ ಸೆಟ್ ಮಾಡುತ್ತಿದ್ದರು. ಅವರಿಗೆ ಗೊತ್ತಿತ್ತು. ಬ್ಯಾಟ್ಸ್ ಮೆನ್ ನನ್ನ ಎಸೆತಗಳಿಗೆ ಯಾವ ರೀತಿ ಹೊಡೆಯುತ್ತಾನೆ ಎಂಬುದು. ಅದಕ್ಕೆ ತಕ್ಕಂತೆ ಅವರು ಫೀಲ್ಡಿಂಗ್ ಸೆಟ್ ಮಾಡುತ್ತಿದ್ದರು. ಇದ್ರಿಂದ ನಾನು ಆತ್ಮವಿಶ್ವಾಸದಿಂದಲೇ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿತ್ತು. ಇದೀಗ ಧೋನಿಯವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಂತ ಕುಲದೀಪ್ ಯಾದವ್ ಧೋನಿಯವರನ್ನು ಗುಣಗಾನ ಮಾಡಿದ್ದಾರೆ.
ಇನ್ನು ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಮತ್ತು ಎಬಿಡಿ ವಿಲಿಯರ್ಸ್ ಅವರಿಗೆ ಬೌಲಿಂಗ್ ಮಾಡುವುದು ದೊಡ್ಡ ಸವಾಲು ಎಂದು ಕುಲದೀಪ್ ಯಾದವ್ ಹೇಳಿದ್ದಾರೆ.