ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲು ಪಾಲಾಗಿರುವ ನಟ ದರ್ಶನ್ಗೆ (Darshan) ಐಟಿ ಸಂಕಷ್ಟ ಶುರುವಾಗಿದ್ದು, ಅಧಿಕಾರಿಗಳು ಬರೋಬ್ಬರಿ 7 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ನಂತರ ಶವ ವಿಲೇವಾರಿ, ಸಾಕ್ಷ್ಯ ನಾಶಕ್ಕಾಗಿ ದರ್ಶನ್ ಲಕ್ಷ ಲಕ್ಷ ಹಣ ನೀಡುವ ಭರವಸೆ ನೀಡಿದ್ದರು ಎಂಬ ಆರೋಪ ದರ್ಶನ್ ಮೇಲಿದೆ. ಹೀಗಾಗಿ ಐಟಿ ಅಧಿಕಾರಿಗಳು ಹಣದ ಮೂಲ ಪತ್ತೆ ಹಚ್ಚಲು ತನಿಖೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಅನುಮತಿ ಪಡೆದು ಐಟಿ ಅಧಿಕಾರಿಗಳು ಬಳ್ಳಾರಿ ಜೈಲಿಗೆ ಭೇಟಿ ನೀಡಿ ಬರೋಬ್ಬರಿ 7 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆದ ಬಳಿಕ ಮನೆಯಲ್ಲಿ ಅಷ್ಟೊಂದು ಹಣ (Money) ಹೇಗೆ ಬಂತು? ಆ ಹಣ ಯಾರಿಗೆ ಸೇರಿದ್ದು? ಆ ಹಣವನ್ನು ನಿಮಗೆ ತಂದುಕೊಟ್ಟಿದ್ಯಾರು? ಸೇರಿದಂತೆ ಹಲವಾರು ಪ್ರಶ್ನೆಗಳನ್ನು ದರ್ಶನ್ ಮುಂದೆ ಇಟ್ಟಿದ್ದಾರೆ.
ಐಟಿ ಅಧಿಕಾರಿಗಳು ದರ್ಶನ್ ಅವರನ್ನು ವಿಚಾರಣೆ ಒಳಪಡಿಸುತ್ತಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಪರ ಅಡಿಟರ್ ಎಂ ಎಸ್ ರಾವ್ ಮತ್ತು ಅಸಿಸ್ಟೆಂಟ್ ಅರುಣ್ ಇಬ್ಬರು ಬೆಳಿಗ್ಗೆ 10:50 ಕ್ಕೆ ಜೈಲಿಗೆ ಬಂದಿದ್ದರು. ಎರಡು ಕಾರುಗಳಲ್ಲಿ ಆಗಮಿಸಿದ ಅಧಿಕಾರಿಗಳು ಮಧ್ಯಾಹ್ನ 12:20ಕ್ಕೆ ಜೈಲು ಪ್ರವೇಶಿಸಿ ಜೈಲು ಅಧೀಕ್ಷಕರ ಕೊಠಡಿಯಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿ ವಿಚಾರಣೆ ನಡೆಸಿದ್ದಾರೆ.