ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ 2028ರ ಮುಖ್ಯಮಂತ್ರಿ ಪಟ್ಟಕ್ಕಾಗಿ ಈಗಲೇ ಪೈಪೋಟಿ ಶುರುವಾಗಿರುವ ಬೆನ್ನಲ್ಲೇ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮದೇ ಶೈಲಿಯಲ್ಲಿ ಬಾಂಬ್ ಸಿಡಿಸಿದ್ದಾರೆ. 2028ಕ್ಕೆ ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ, ನನ್ನನ್ನು ಮುಖ್ಯಮಂತ್ರಿ ಮಾಡುತ್ತಾರಾ ಎಂದು ಪ್ರಶ್ನಿಸುವ ಮೂಲಕ ಅವರು ಚರ್ಚೆಗೆ ಗ್ರಾಸವಾಗಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ನಾಯಕತ್ವದ ಚರ್ಚೆ ಹಾಗೂ ಪ್ರತಿಪಕ್ಷ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನನಗೂ ಸಿಎಂ ಆಗುವ ಆಸೆಯಿದೆ ಆದರೆ ಹೈಕಮಾಂಡ್ ಅಂತಿಮ
ಮುಂದಿನ ಚುನಾವಣೆಯಲ್ಲಿ ಡಿ ಕೆ ಶಿವಕುಮಾರ್ ಅವರೇ ಸಿಎಂ ಎಂಬ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, ನನಗೂ ಇನ್ನು 25 ವರ್ಷಗಳಲ್ಲಿ ಸಿಎಂ ಆಗಬೇಕು ಎಂಬ ಆಸೆ ಇದೆ. 2028ಕ್ಕೆ ನಾನು ಅಭ್ಯರ್ಥಿ ಎಂದರೆ ಒಪ್ಪುತ್ತಾರಾ? ಎಂದು ಹಾಸ್ಯ ಚಟಾಕಿಯೊಂದಿಗೆ ಪ್ರಶ್ನಿಸಿದರು. ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ನನ್ನ ಎರಡು ಕಣ್ಣುಗಳಿದ್ದಂತೆ. ಸಿದ್ದರಾಮಯ್ಯ ಅವರು ನನ್ನನ್ನು ಒಬ್ಬ ಓಬಿಸಿ ಹುಡುಗ ಎಂದು ಬೆಳೆಸುತ್ತಿದ್ದಾರೆ. ಇತ್ತ ಡಿಕೆಶಿ ಸಾಹೇಬರು ನನ್ನ ಮೇಲೆ ಪ್ರೀತಿಯಿಂದ ಮೈಸೂರು ರಸ್ತೆಯ ಪ್ರೈಮ್ ಏರಿಯಾದಲ್ಲಿ ಕಾಲೇಜು ಕಟ್ಟಲು ಸಿಎ ಸೈಟ್ ಕೊಟ್ಟಿದ್ದಾರೆ. ಹೈಕಮಾಂಡ್ ಯಾರನ್ನು ಬೇಕಾದರೂ ಸಿಎಂ ಮಾಡಲಿ, ನನಗೆ ಇಬ್ಬರೂ ನಾಯಕರು ಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಪ್ರತಾಪ್ ಸಿಂಹ ಅವರೇ ದಲಿತರ ರಕ್ತದಲ್ಲೇ ಅಂಬೇಡ್ಕರ್ ಇದ್ದಾರೆ
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ದಲಿತ ಸಮುದಾಯ ಮತ್ತು ನೀಲಿ ಶಾಲಿನ ಬಗ್ಗೆ ನೀಡಿರುವ ಹೇಳಿಕೆಗೆ ಪ್ರದೀಪ್ ಈಶ್ವರ್ ತೀವ್ರ ಆಕ್ರೋಶ ಹೊರಹಾಕಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಓದಿಕೊಂಡಿದ್ದೀರಾ ಎಂದು ಕೇಳುವ ಪ್ರತಾಪ್ ಸಿಂಹ ಅವರಿಗೆ ಅಂಬೇಡ್ಕರ್ ವಂಶಸ್ಥರ ಬಗ್ಗೆ ಮಾತನಾಡುವ ಹಕ್ಕಿಲ್ಲ. ದಲಿತರ ರಕ್ತದಲ್ಲೇ ಅಂಬೇಡ್ಕರ್ ಇದ್ದಾರೆ, ಅವರಿಗೆ ನೀನು ಪಾಠ ಮಾಡಬೇಕಾ ಎಂದು ಕಿಡಿಕಾರಿದರು. ಮಸೀದಿ ಮುಂದೆ ಪಟಾಕಿ ಹಚ್ಚಿ ಪ್ರಚೋದನೆ ನೀಡುವುದನ್ನು ಪ್ರಶ್ನಿಸಿದ ಅವರು, ಈ ದೇಶದಲ್ಲಿ ಮುಸ್ಲಿಮರು ಬದುಕಬಾರದಾ? ನೀವು ಏನು ಮಾಡಿದರೂ ಸರಿ, ನಾವು ಮಾತನಾಡಿದರೆ ತಪ್ಪಾ ಎಂದು ಪ್ರಶ್ನಿಸಿದರು.
ಜ್ಞಾನೇಶ್ ಕುಮಾರ್ ಗೆ ರಾಜ್ಯಪಾಲರ ಪಟ್ಟ ಫಿಕ್ಸ್
ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧವೂ ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದರು. ಚುನಾವಣಾ ಆಯೋಗವು ಬಿಜೆಪಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಜ್ಞಾನೇಶ್ ಕುಮಾರ್ ಇನ್ನೊಂದಿಷ್ಟು ಇಂಪ್ರೆಸ್ ಮಾಡಿದರೆ ಅವರು ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರಾಗುತ್ತಾರೆ ಅಥವಾ ವೈಸ್ ಪ್ರೆಸಿಡೆಂಟ್ ಕೂಡ ಆಗಬಹುದು ಎಂದು ಭವಿಷ್ಯ ನುಡಿದರು. ಆಯೋಗದ ವಿಶ್ವಾಸಾರ್ಹತೆ ಬಗ್ಗೆ ಅವರು ಸಂಶಯ ವ್ಯಕ್ತಪಡಿಸಿದರು.
ಛಲವಾದಿ ನಾರಾಯಣಸ್ವಾಮಿಗೆ ಮದುವೆಯಾದರೂ ಹುಚ್ಚು ಕಡಿಮೆಯಾಗಿಲ್ಲ
ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ ಪ್ರದೀಪ್ ಈಶ್ವರ್, ಅವರಿಗೆ ಮದುವೆಯಾಗಿ ಮಕ್ಕಳಾದರೂ ಹುಚ್ಚು ಕಡಿಮೆಯಾಗಿಲ್ಲ ಎಂದು ಲೇವಡಿ ಮಾಡಿದರು. ಮೂರು ದಶಕಗಳ ಕಾಲ ಮಲ್ಲಿಕಾರ್ಜುನ ಖರ್ಗೆ ಅವರ ಹಿಂದೆ ಬಕೆಟ್ ಹಿಡಿದು ತಿರುಗುತ್ತಿದ್ದ ಇವರು, ಈಗ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮಾತನಾಡುತ್ತಾರೆ. ಓದಿಕೊಳ್ಳದೆ ಪ್ರೆಸ್ ಮೀಟ್ ಮಾಡುವ ಇವರ ಗುಣ ನನಗೆ ಇಷ್ಟ ಎಂದು ವ್ಯಂಗ್ಯವಾಡಿದರು. ಸಿಎ ಸೈಟ್ ಪಡೆದು ಖಾಸಗಿಯವರಿಗೆ ಕೊಟ್ಟಿರುವ ಬಗ್ಗೆ ತನಿಖೆಯಾಗಲಿ ಎಂದು ಅವರು ಸವಾಲು ಹಾಕಿದರು.








