ಚಿಕ್ಕೋಡಿ : 20 ವರ್ಷದ ಒಳಗೆ ನಾನು ಮುಖ್ಯಮಂತ್ರಿ ಆಗಿಯೇ ಆಗುತ್ತೇನೆ ಎಂದು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹುಕ್ಕೇರಿ ಪಟ್ಟಣದ ಈಶ್ವರಲಿಂಗ ಸಮುದಾಯ ಭವನದ ಶೀಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ದೇಶದಲ್ಲಿ ಬಿಜೆಪಿ ಸರ್ಕಾರ 10 ವರ್ಷಗಳ ಕಾಲ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದು, ಜನಪರ ಕಾರ್ಯ ಮಾಡಲಿದೆ. ಇನ್ನೂ 20 ವರ್ಷ ನಾನು ರಾಜಕಾರಣದಲ್ಲಿ ಇರುತ್ತೇನೆ. ಈ 20 ವರ್ಷದ ಒಳಗೆ ನಾನು ಮುಖ್ಯಮಂತ್ರಿ ಆಗಿಯೇ ಆಗುತ್ತೇನೆ ಎಂದರು.
ಇನ್ನು ಯಡಿಯೂರಪ್ಪ ಯಾವತ್ತೂ ನಮ್ಮ ನಾಯಕರು. ಅದರಲ್ಲಿ ಎರಡು ಮಾತಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಕೋವಿಡ್ ಸೇರಿದಂತೆ ಎಂತಹ ಪರಿಸ್ಥಿತಿ ಬಂದರೂ ನಿಭಾಯಿಸುವ ಶಕ್ತಿ ದೇಶದಲ್ಲಿ ಯಡಿಯೂರಪ್ಪನವರಿಗೆ ಮಾತ್ರ ಇದೆ ಎಂದು ಬಿ.ಎಸ್ ವೈ ಅವರನ್ನು ಹೊಗಳಿದರು.
ಇದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಒಂದು ವಾರ ಅಥವಾ 10 ದಿನದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದರು.