ಐಸಿಸಿ ಟೆಸ್ಟ್ ಶ್ರೇಯಾಂಕ – ರಹಾನೆ ಆರನೇ ಸ್ಥಾನ.. ಆಲ್ ರೌಂಡರ್ ನಲ್ಲಿ ಜಡೇಜಾಗೆ ಮೂರನೇ ಸ್ಥಾನ
ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ ಮೆನ್ ಸ್ಟೀವ್ ಸ್ಮಿತ್ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮೆನ್ ಗಳು. ಆದ್ರೆ ವರ್ಷಾಂತ್ಯದ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಇವರಿಬ್ಬರನ್ನು ಹಿಂದಿಕ್ಕಿದ್ದಾರೆ.
ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಕೇನ್ ವಿಲಿಯಮ್ಸನ್ ಅವರು ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ. ಭಾರತದ ವಿರಾಟ್ ಕೊಹ್ಲಿ ಎರಡನೇ ಸ್ಥಾನ ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.
ಕೇನ್ ವಿಲಿಯಮ್ಸನ್ ಅವರು 890 ಅಂಕಗಳನ್ನು ಪಡೆದುಕೊಂಡಿದ್ರೆ, ವಿರಾಟ್ ಕೊಹ್ಲಿ 879 ಅಂಕಗಳನ್ನು ಪಡೆದಿದ್ದಾರೆ. ಹಾಗೇ ಸ್ಟೀವ್ ಸ್ಮಿತ್ 877 ಅಂಕ ಗಿಟ್ಟಿಸಿಕೊಂಡಿದ್ದಾರೆ. ಸದ್ಯದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಕೇವಲ ಒಂದು ಪಂದ್ಯವನ್ನಾಡಿದ್ದಾರೆ. ಆದ್ರೆ ಸ್ಟೀವ್ ಸ್ಮಿತ್ ಪಂದ್ಯಗಳನ್ನು ಆಡುತ್ತಿದ್ದರೂ ಬ್ಯಾಟ್ ನಿಂದ ರನ್ ಗಳು ಹರಿದು ಬಂದಿಲ್ಲ.
ಈ ನಡುವೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾದ ಹಂಗಾಮಿ ನಾಯಕ ಅಜಿಂಕ್ಯಾ ರಹಾನೆ ಅವರು ಆರನೇ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ರಹಾನೆ ಐದನೇ ಸ್ಥಾನದಲ್ಲಿದ್ರು. ನಂತರ ಹಿನ್ನಡೆ ಅನುಭವಿಸಿದ್ದ ರಹಾನೆ ಮತ್ತೆ ಆರನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಟೀಮ್ ಇಂಡಿಯಾ ಪರ ಚೇತೇಶ್ವರ ಪೂಜಾರ 10ನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಭಾರತದ ಜಾದೂಗಾರ ಆರ್. ಅಶ್ವಿನ್ ಏಳನೇ ಸ್ಥಾನದಲ್ಲಿದ್ರೆ, ಜಸ್ಪ್ರಿತ್ ಬೂಮ್ರಾ 9ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಇಂಗ್ಲೆಂಡ್‍ನ ಸ್ಟುವರ್ಟ್ ಬ್ರಾಡ್ ಎರಡನೇ ಸ್ಥಾನ ಹಾಗೂ ನೇಲ್ ವಾಗ್ನರ್ ಮೂರನೇ ಸ್ಥಾನ, ಟೀಮ್ ಸೌಥಿ ನಾಲ್ಕನೇ ಸ್ಥಾನ ಹಾಗೂ ಮಿಟ್ಚೆಲ್ ಸ್ಟಾರ್ಕ್ ಐದನೇ ಸ್ಥಾನದಲ್ಲಿದ್ದಾರೆ.
ಆಲ್ ರೌಂಡರ್ ವಿಭಾಗದಲ್ಲಿ ಭಾರತದ ರವೀಂದ್ರ ಜಡೇಜಾ ಮೂರನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಅಗ್ರ ಸ್ಥಾನದಲ್ಲಿದ್ರೆ, ವೆಸ್ಟ್ ಇಂಡೀಸ್ ನ ಜೇಸನ್ ಹೋಲ್ಡರ್ ಎರಡನೇ ಸ್ಥಾನದಲ್ಲಿದ್ದಾರೆ.