ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ : ಗರಿಷ್ಠ ವಿಕೆಟ್ ಪಡೆದ ಟಾಪ್-5ನಲ್ಲಿ ಅಶ್ವಿನ್..!
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಲು ಆರ್. ಅಶ್ವಿನ್ ಗೆ ಅತ್ಯುತ್ತಮ ಅವಕಾಶವಿದೆ. ಫೈನಲ್ ಪಂದ್ಯದಲ್ಲಿ ಅಶ್ವಿನ್ ಅವರು ನಾಲ್ಕು ವಿಕೆಟ್ ಪಡೆದ್ರೆ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಲಿನಲ್ಲಿ ಅಗ್ರಸ್ಥಾನಲ್ಲಿರುತ್ತಾರೆ.
ಸದ್ಯ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್ ಅಶ್ವಿನ್ ಅವರು 13 ಪಂದ್ಯಗಳಲ್ಲಿ 67 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಅಶ್ವಿನ್ ಅವರು ನಾಲ್ಕು ಬಾರಿ ಐದಕ್ಕಿಂತ ಹೆಚ್ಚು ಹಾಗೂ ಒಂದು ಬಾರಿ ಹತ್ತು ವಿಕೆಟ್ ಪಡೆದ ಸಾಧನೆ ಕೂಡ ಮಾಡಿದ್ದಾರೆ.
ಫೈನಲ್ ಗೆ ಮುನ್ನ ಗರಿಷ್ಠ ವಿಕೆಟ್ ಪಡೆದವರ ಸಾಲಿನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅವರು ಮೊದಲ ಸ್ಥಾನದಲ್ಲಿದ್ದಾರೆ. ಪ್ಯಾಟ್ ಕಮಿನ್ಸ್ ಅವರು 14 ಪಂದ್ಯಗಳಲ್ಲಿ 70 ವಿಕೆಟ್ ಪಡೆದಿದ್ದಾರೆ.
ಇನ್ನು ಎರಡನೇ ಸ್ಥಾನದಲ್ಲಿದ್ದಾರೆ ಇಂಗ್ಲೆಂಡ್ ನ ವೇಗಿ ಸ್ಟುವರ್ಟ್ ಬ್ರಾಡ್. 17 ಪಂದ್ಯಗಳಲ್ಲಿ ಸ್ಟುವರ್ಟ್ ಬ್ರಾಡ್ ಅವರು 69 ವಿಕೆಟ್ ಉರುಳಿಸಿದ್ರೆ, ಅಶ್ವಿನ್ 67 ವಿಕೆಟ್ ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಇದೀಗ ಫೈನಲ್ ನಲ್ಲಿ ಆಡುತ್ತಿರುವುದರಿಂದ ಈ ದಾಖಲೆಗಳನ್ನು ಅಳಿಸಿ ಹಾಕಿ ಟಾಪ್ ವನ್ ನಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.
ಹಾಗೇ ಆಸ್ಟ್ರೇಲಿಯಾದ ನಥಾನ್ ಲಿಯಾನ್ ಅವರು 14 ಪಂದ್ಯಗಳಲ್ಲಿ 56 ವಿಕೆಟ್ ಪಡೆದು ನಾಲ್ಕನೇ ಸ್ಥಾನದಲ್ಲಿದ್ರೆ, ನ್ಯೂಜಿಲೆಂಡ್ ನ ಟೀಮ್ ಸೌಥಿ ಅವರು 51 ವಿಕೆಟ್ ಪಡೆದು ಐದನೇ ಸ್ಥಾನದಲ್ಲಿದ್ದಾರೆ.
ಇನ್ನು ಭಾರತದ ಪರ ಇಶಾಂತ್ ಶರ್ಮಾ 11 ಪಂದ್ಯಗಳಲ್ಲಿ 36 ವಿಕೆಟ್ ಪಡೆದ್ರೆ, ಮಹಮ್ಮದ್ ಶಮಿ 36 ವಿಕೆಟ್ ಪಡೆದು ಕ್ರಮವಾಗಿ 13 ಮತ್ತು 14ನೇ ಸ್ಥಾನದಲ್ಲಿದ್ದಾರೆ. ಇನ್ನೊಂದೆಡೆ ಜಸ್ಪ್ರಿತ್ ಬೂಮ್ರಾ ಅವರು 34 ವಿಕೆಟ್ ಕಬಳಿಸಿ 15ನೇ ಸ್ಥಾನದಲ್ಲಿದ್ದಾರೆ.
ಇನ್ನುಳಿದಂತೆ ಉಮೇಶ್ ಯಾದವ್ 7 ಪಂದ್ಯಗಳಲ್ಲಿ 29 ವಿಕೆಟ್, ರವಿಂದ್ರ ಜಡೇಜಾ 10 ಪಂದ್ಯಗಳಲ್ಲಿ 28 ವಿಕೆಟ್ ಪಡೆದ್ರೆ, ಅಕ್ಷರ್ ಪಟೇಲ್ 3 ಪಂದ್ಯಗಳಲ್ಲಿ 27 ವಿಕೆಟ್ ಉರುಳಿಸಿದ್ದಾರೆ. ಮಹಮ್ಮದ್ ಸೀರಾಜ್ 5 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ. ಒಟ್ಟಿನಲ್ಲಿ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಗಳು ಟಾಪ್ ಫಿಫ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಇದೀಗ ಫೈನಲ್ ಪಂದ್ಯಕ್ಕೆ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸಿದ್ಧಗೊಳ್ಳುತ್ತಿವೆ. ಜೂನ್ 18ರಿಂದ ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ಫೈನಲ್ ಪಂದ್ಯ ಆರಂಭವಾಗಲಿದೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನಗಳನ್ನು ನೋಡಿದಾಗ ಅಂತಿಮ 11ರ ಬಳಗವನ್ನು ಆಯ್ಕೆ ಮಾಡೋದು ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಲಿದೆ.