ಉಡುಪಿ:ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇತ್ತೀಚೆಗೆ ಎದ್ದಿರುವ ವಿವಾದವು ಕೇವಲ ಹೇಳಿಕೆಯಲ್ಲ, ಅದೊಂದು ವ್ಯವಸ್ಥಿತ ವೈಚಾರಿಕ ಆಕ್ರಮಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನೂರಾರು ಶವಗಳನ್ನು ಹೂತುಹಾಕಲಾಗಿದೆ ಎಂಬ ಬುರುಡೆ ಚಿನ್ನಯ್ಯನ ಹೇಳಿಕೆಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಅವರು, ಉಡುಪಿಯ ಬಿಜೆಪಿ ಕಚೇರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ಗಂಭೀರ ಆರೋಪ ಮಾಡಿದರು.
ಹಿಂದೂ ಶ್ರದ್ಧಾ ಕೇಂದ್ರಗಳೇ ಗುರಿ
ಮೂರು ವರ್ಷಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದ ಮೇಲೆ ಇದೇ ರೀತಿ ದಾಳಿ ನಡೆದಿತ್ತು, ಈಗ ಧರ್ಮಸ್ಥಳದ ಮೇಲೆ ವೈಚಾರಿಕ ಆಕ್ರಮಣ ನಡೆದಿದೆ. ಮುಂದಿನ ದಿನಗಳಲ್ಲಿ ಇವರ ಗುರಿ ಮೂಡಬಿದಿರೆ ಆಗಲಿದೆ ಎಂದು ಸಂತೋಷ್ ಭವಿಷ್ಯ ನುಡಿದರು. “ಇದು ನಮ್ಮ ಶ್ರದ್ಧೆ, ನಂಬಿಕೆ ಮತ್ತು ಸಂಸ್ಕೃತಿಯ ಮೇಲೆ ನಡೆದ ಆಕ್ರಮಣ. ಹಿಂದೂಗಳ ಶ್ರದ್ಧಾ ಕೇಂದ್ರಗಳು, ಗೋವು, ನಮ್ಮ ಕುಟುಂಬ ವ್ಯವಸ್ಥೆ, ಮೌಲ್ಯಗಳು ಮತ್ತು ತೀರ್ಥಕ್ಷೇತ್ರಗಳೇ ಇವರ ಪ್ರಮುಖ ಗುರಿ,” ಎಂದು ಸಂತೋಷ್ ಆಕ್ರೋಶ ವ್ಯಕ್ತಪಡಿಸಿದರು.
ಹುಲಿಗೆ ರಕ್ತದ ರುಚಿ ಸಿಕ್ಕಿದೆ
ವೈಚಾರಿಕ ದಾಳಿಕೋರರನ್ನು ಹುಲಿಗೆ ಹೋಲಿಸಿದ ಅವರು, “ಹುಲಿಗೆ ಒಮ್ಮೆ ರಕ್ತದ ರುಚಿ ಹತ್ತಿದರೆ ಸುಮ್ಮನಿರುವುದಿಲ್ಲ. ಅದೇ ರೀತಿ, ವೈಚಾರಿಕ ರಾಜಕೀಯ ಮಾಡುವವರಿಗೆ ಶಬರಿಮಲೆ, ಈಶ ಆಶ್ರಮ, ಶನಿ ಶಿಂಗ್ಣಾಪುರದಂತಹ ಕ್ಷೇತ್ರಗಳಲ್ಲಿ ಸ್ವಲ್ಪ ರಕ್ತದ ರುಚಿ ಸಿಕ್ಕಿದೆ. ಈಗ ಧರ್ಮಸ್ಥಳದಲ್ಲಿ ಆ ರುಚಿ ನೋಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಆಕ್ರಮಣಕ್ಕೆ ತಕ್ಕ ಶಿಕ್ಷೆಯಾಗಬೇಕು ಮತ್ತು ಇಂತಹ ಅಪಪ್ರಚಾರ ಮಾಡುವವರಿಗೆ ಶಾಸ್ತಿಯಾಗಬೇಕು. ಈ ಸಂಕಲ್ಪವನ್ನು ನಾವು ನಮ್ಮ ಕಾರ್ಯಾಲಯದಿಂದಲೇ ಆರಂಭಿಸಬೇಕು,” ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಕುಂಭಮೇಳದ ಅಪಪ್ರಚಾರ ವಿಫಲವಾಗಿತ್ತು
ಹಿಂದೆಯೂ ಕುಂಭಮೇಳದ ಬಗ್ಗೆ ನಿರಂತರವಾಗಿ ಅಪಪ್ರಚಾರ ನಡೆಸಲಾಯಿತು. “ಕುಂಭಮೇಳಕ್ಕೆ ಹೋದರೆ ಜಗತ್ತಿನ ಎಲ್ಲಾ ಕಾಯಿಲೆಗಳು ಬರುತ್ತವೆ ಎಂದು ಸುಳ್ಳು ಹಬ್ಬಿಸಿದರು. ಆದರೆ ದೇಶದ ಜನರ ನಂಬಿಕೆ ಅಚಲವಾಗಿತ್ತು. ಅಪಪ್ರಚಾರದ ನಂತರ ಕೋಟ್ಯಂತರ ಜನರು ಭಾಗವಹಿಸಿ ತಮ್ಮ ಶ್ರದ್ಧೆ ಮೆರೆದರು. ಇದು ನಮ್ಮ ಸಂಸ್ಕೃತಿಯ ಶಕ್ತಿ,” ಎಂದರು.
ಸವಾಲಿಗೆ ತಕ್ಕ ಉತ್ತರ ನಿಶ್ಚಿತ
ನಾವು ಇಂತಹ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತೇವೆ. ನಮ್ಮ ದೇಶ ಮತ್ತು ಸಂಸ್ಕೃತಿಯ ಮೇಲೆ ಹಾಕುತ್ತಿರುವ ಈ ಸವಾಲಿಗೆ ನಾವು ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನು ನೀಡುತ್ತೇವೆ. ಯಾರೂ ನಮ್ಮ ಶ್ರದ್ಧೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ,” ಎಂದು ಬಿ.ಎಲ್. ಸಂತೋಷ್ ಸವಾಲು ಹಾಕಿದರು.








