ರಾಷ್ಟ್ರ ರಾಜಧಾನಿಯಲ್ಲಿ ಐಇಡಿ ಬಾಂಬ್ ಪತ್ತೆ Saaksha Tv
ದೆಹಲಿ: ದೆಹಲಿಯ ಈಶಾನ್ಯ ಭಾಗದಲ್ಲಿರುವ ಓಲ್ಡ್ ಸೀಮಾಪುರಿ ಪ್ರದೇಶದ ಮನೆಯೊಂದರಲ್ಲಿ ಸುಧಾರಿತ ಸ್ಫೋಟಕ ಐಇಡಿ ಹೊಂದಿರುವ ಚೀಲವೊಂದು ಗುರುವಾರ ಪತ್ತೆಯಾಗಿದೆ.
ಸೀಮಾಪುರಿಯ ಕಟ್ಟಡವೊಂದರ ಎರಡನೇ ಮಹಡಿಯಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾದ ಬಗ್ಗೆ ಕರೆ ಬಂದಿದ್ದು, ವಿಶೇಷ ಸೆಲ್ ತಂಡಗಳು ಸ್ಥಳಕ್ಕೆ ಧಾವಿಸಿವೆ. ಅಗ್ನಿಶಾಮಕ ದಳ, ಎನ್‌ಎಸ್‌ಜಿ ಅಧಿಕಾರಿಗಳು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಕೂಡ ಸ್ಥಳಕ್ಕೆ ತಲುಪಿದೆ. ಪರಿಶೀಲನೆ ನಡೆಸಿದಾಗ ಬ್ಯಾಗ್ ನಲ್ಲಿ IED ಸ್ಪೋಟ್ ಕ ಪತ್ತೆಯಾಗಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಟ್ಟಡದ ಎರಡನೇ ಮಹಡಿಯಿಂದ ಐಇಡಿ ಹೊಂದಿರುವ ಬ್ಯಾಗ್ ಅನ್ನು ಎನ್‌ಎಸ್‌ಜಿ ಬಾಂಬ್ ನಿಷ್ಕ್ರಿಯ ದಳ ಎತ್ತಿಕೊಂಡಿದೆ. ಐಇಡಿ ನಲ್ಲಿ ಅಮೋನಿಯಂ ನೈಟ್ರೇಟ್ ಮತ್ತು ಆರ್ಡಿಎಕ್ಸ್ ಹೊಂದಿರುವ ಟೈಮರ್ ಸಾಧನವನ್ನು ಬಳಸಲಾಗಿದೆ. ಸರಿಸುಮಾರು 2.5 ಕೆಜಿಯಿಂದ 3 ಕೆಜಿ ತೂಕದ IED ಅನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ ಬಾಂಬ್ ನಿಷ್ಕ್ರಿಯ ದಳ (BDS) ನಿಷ್ಕ್ರಿಯಗೊಳಿಸಿದೆ.
ಸ್ಫೋಟಕ ಪತ್ತೆಯಾಗಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದವರನ್ನು ಖಾಲಿ ಮಾಡಲಾಗಿದ್ದು, ಆ ಮನೆಯಲ್ಲಿ ವಾಸವಿದ್ದ ಬಾಡಿಗೆದಾರರು ಈಗ ತಲೆಮರೆಸಿಕೊಂಡಿರುವ ಬಗ್ಗೆ ನಮಗೆ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.








