ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾದರೆ, ಕೋವಿಡ್-19 ನಿಂದ ರಕ್ಷಣೆ ನೀಡುತ್ತದೆ ಎಂಬರ್ಥವಲ್ಲ – ವಿಜ್ಞಾನಿಗಳು
ಹೊಸದಿಲ್ಲಿ, ಸೆಪ್ಟೆಂಬರ್ 08: ಕೊರೋನಾ ಸೋಂಕಿನಿಂದ ಚೇತರಿಕೆ ಕಂಡ ವ್ಯಕ್ತಿಗಳ ದೇಹದಲ್ಲಿ ಪ್ರತಿಕಾಯಗಳು ಸೃಷ್ಟಿಯಾಗಿದೆ ಎಂದರೆ ಅದು ಕೋವಿಡ್-19 ನಿಂದ ರಕ್ಷಣೆ ನೀಡುತ್ತದೆ ಎಂಬರ್ಥವಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.ದೇಹದಲ್ಲಿ ಪ್ರತಿಕಾಯಗಳು ಎಷ್ಟು ದಿನಗಳ ವರೆಗೆ ಇರಲಿವೆ ಎಂಬುವುದು ಕೂಡ ಮುಖ್ಯವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೋಮವಾರ ಒಟ್ಟು 90,062 ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 42 ಲಕ್ಷ ದಾಟಿದೆ. ಈ ಸಂದರ್ಭದಲ್ಲಿ ಪ್ರತಿಕಾಯಗಳು ಸೋಂಕಿನ ವಿರುದ್ಧ ಯಾವ ರೀತಿ ಹೋರಾಡುತ್ತವೆ ಎಂಬುವುದರ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಿವೆ.
ಪ್ರತಿಕಾಯಗಳಲ್ಲಿ ತಟಸ್ಥಗೊಳಿಸುವ ಪ್ರತಿಕಾಯಗಳು ಹಾಗೂ ಸರಳ ಪ್ರತಿಕಾಯಗಳು ಎಂದು ಎರಡು ವಿಧಗಳಿದ್ದು, ಅವುಗಳು ಕೊರೊನಾ ಸೋಂಕು ಶ್ವಾಸಕೋಶಕ್ಕೆ ಹೋಗುವುದನ್ನು ತಡೆಯುತ್ತದೆ. ಅಂತೆಯೇ ದೇಹದೆ ಇತರ ಭಾಗಗಳಿಗೆ ಸೋಂಕು ವ್ಯಾಪಿಸದಂತೆ ನೋಡಿಕೊಳ್ಳುತ್ತದೆ.
ಸರಳ ಪ್ರತಿಕಾಯಗಳು ಸೋಂಕು ಇರುವಿಕೆಯನ್ನು ಸೂಚಿಸುತ್ತವೆ. ಆದರೆ ದೇಹದಲ್ಲಿ ಸರಳ ಪ್ರತಿಕಾಯಗಳು ಉತ್ಪತ್ತಿಯಾದರೆ ಅವುಗಳು ವೈರಸ್ ಹರಡುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.