ಸಿಎಂ ಹುದ್ದೆ ಖಾಲಿಯಾದರೆ ನೆಕ್ಸ್ಟ್ ನಾನೇ : ಉಮೇಶ್ ಕತ್ತಿ
ಬೆಳಗಾವಿ : ಸಿಎಂ ಹುದ್ದೆ ಖಾಲಿಯಾದರೆ ನೆಕ್ಸ್ಟ್ ನಾನೇ ಇದ್ದೇನೆ, ಮುಖ್ಯಮಂತ್ರಿ ಸ್ಥಾನಕ್ಕೆ ಮುಂದೆ ನಂದೇ ನಂಬರ್ ಇದೆ ಎಂದು ಸಚಿವ ಉಮೇಶ್ ಕತ್ತಿ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಆಹಾರ ಸಚಿವ ಉಮೇಶ್ ಕತ್ತಿ, ರಾಜ್ಯದಲ್ಲಿ ಮುಖ್ಯಮಂತ್ರಿ ಇದ್ದಾರೆ, ಸರ್ಕಾರವಿದೆ, ಒಳ್ಳೆಯ ಆಡಳಿತ ನಡೆಯುತ್ತಿದೆ. ಆದರೂ ಕಳೆದ ವರ್ಷದಿಂದ ಸಿಎಂ ಬದಲಾವಣೆ ಕೂಗು ಇದ್ದೇ ಇದೆ. ಅದು ಯಾರು ಬದಲಾಯಿಸುತ್ತಿದ್ದಾರೋ ನನ್ನ ಗಮನಕ್ಕೆ ಬಂದಿಲ್ಲ ಎಂದಿರುವ ಅವರು ಸಿಎಂ ಹುದ್ದೆ ಖಾಲಿಯಾದರೆ ನೆಕ್ಸ್ಟ್ ನಾನೇ ಇದ್ದೇನೆ, ಮುಖ್ಯಮಂತ್ರಿ ಸ್ಥಾನಕ್ಕೆ ಮುಂದೆ ನಂದೇ ನಂಬರ್ ಇದೆ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಮಾತನಾಡಿ, ಹುಕ್ಕೇರಿ ಮತಕ್ಷೇತ್ರದ ಜನ 8 ಬಾರಿ ಶಾಸಕನಾಗಿ ಮಾಡಿ ಆಶೀರ್ವಾದ ಮಾಡಿದ್ದಾರೆ. ಎಂಟು ಬಾರಿ ಶಾಸಕನಾದ ಮೇಲೆ ಮಂತ್ರಿ ಆಗಬೇಕೆಂಬ ಆಸೆ ಇತ್ತು. ನಾಲ್ಕು ಬಾರಿ ರಾಜ್ಯದ ಮಂತ್ರಿಯಾಗಿ ನಾನು ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಆಗಲು ಎಲ್ಲ ಯೋಗ್ಯತೆಗಳು ನನ್ನಲ್ಲಿ ಇವೆ ಎಂದು ಹೇಳಿದ್ದಾರೆ.
ಇನ್ನು ನನ್ನಲ್ಲಿ ಯಾವುದೇ ರೀತಿಯ ಬ್ಲ್ಯಾಕ್ ಸ್ಪಾಟ್ ಇಲ್ಲ, ಕಳಂಕರಹಿತ ವ್ಯಕ್ತಿತ್ವ ಇದೆ. ರಾಜ್ಯದ ಜನ ಆಶೀರ್ವದಿಸಿದರೆ, ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದರೆ ನಾನು ಸಿಎಂ ಆಗುವ ಆಸೆ ಉಳ್ಳವನು. ಪಕ್ಷ ಮನಸ್ಸು ಮಾಡಿದರೆ ರಾಜ್ಯದ ಸಿಎಂ ಆಗಬೇಕೆಂದು ಮನಸು ಮಾಡಿದ್ದೇನೆ ಎಂದು ಮತ್ತೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ.