ದಾವಣಗೆರೆ: ಸಿಎಂ ವಿಚಾರ ಕಾಂಗ್ರೆಸ್ ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷಗಳು ಸಿದ್ದರಾಮಯ್ಯರ ರಾಜೀನಾಮೆಗೆ ನಾನಾ ತಂತ್ರ ಹೆಣೆಯುತ್ತಿವೆ. ಈ ಮಧ್ಯೆ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿ, ಎಲ್ಲ ಕಿತ್ತಾಟಕ್ಕೆ ತೆರೆ ಎಳೆದಿದ್ದಾರೆ.
ಆದರೆ, ಈ ವೇಳೆ ಪ್ರಸಂಗ ಬಂದರೆ ನಾನೇ ಸಿಎಂ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೇನೆ ಎಂದು ಕಾಂಗ್ರೆಸ್‍ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಹೇಳಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಆದರೆ, ಲಿಂಗಾಯತ ಸಿಎಂ ಆಗಬೇಕು ಎಂದು ಬಂದರೆ ಸೆಡ್ಡು ಹೊಡೆಯುತ್ತೇವೆ ಎಂದಿದ್ದಾರೆ.
ಸಿದ್ದರಾಮಯ್ಯ (Siddaramaiah) ಒಳ್ಳೆಯ ಅಡಳಿತ ಮಾಡುತ್ತಿದ್ದಾರೆ. ಅವರ ಅವಧಿ ಮುಗಿದ ಮೇಲೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದಕ್ಕೂ ಮುನ್ನ ನಮ್ಮ ಶಾಸಕರು ಯಾರನ್ನು ಆಯ್ಕೆ ಮಾಡುತ್ತಾರೋ ಅವರನ್ನು ಹೈಕಮಾಂಡ್ ಸಿಎಂ ಮಾಡುತ್ತದೆ. ಹಲವರು ಸಚಿವರಿಗೆ ಸಿಎಂ ಆಗಬೇಕು ಎಂಬ ಆಸೆ ಹೆಚ್ಚಿದೆ. ಆಸೆ ಇದ್ದವರಿಗೆ ನಿರಾಸೆ ಆಗಲಿದೆ. ಕೆಲವರು ಬಾಯಿಗೆ ಬಂದಂತೆ ಮಾತಾಡಿಕೊಂಡು ಹೋಗುತ್ತಿದ್ದಾರೆ. ಎಲ್ಲರಿಗೂ ನಿರಾಶೆ ಆಗುತ್ತದೆ ಎಂದ ಹೇಳಿದ್ದಾರೆ.
ಹೆಸರು ಇದ್ದವರು ಇಲ್ಲದವರು ಕೂಡ ಸಿಎಂ ರೇಸ್‍ನಲ್ಲಿ ಇರ್ತಾರೆ. ರಾಜಕೀಯದಲ್ಲಿ ಜೂನಿಯರ್ ಸೀನಿಯರ್ ಎಂಬ ಪ್ರಶ್ನೆ ಬರುವುದಿಲ್ಲ. ನಮ್ಮ ಕುರ್ಚಿ ಭದ್ರವಾಗಿದೆ ಎಂದು ಹೇಳಿದ್ದಾರೆ.








