ಮುಂಬೈ, ಮೇ 24 : ಇತ್ತೀಚೆಗೆ ಬಾಲಿವುಡ್ ನ ಹಿರಿಯ ನಟಿ ಮುಮ್ತಾಜ್ ಸಾವಿನ ಕುರಿತಾಗಿ ವದಂತಿಗಳು ಹರಡಿದ್ದವು. ಇದೀಗ ಮುಮ್ತಾಜ್ ಅವರು ವೀಡಿಯೋವೊಂದರಲ್ಲಿ ಕಾಣಸಿಕೊಂಡು ನಾನು ಇನ್ನೂ ಜೀವಂತವಾಗಿ ಇರುವುದಾಗಿ ಹೇಳಿಕೊಂಡು, ತನ್ನ ಸಾವಿನ ಬಗ್ಗೆ ಹರಡಿದ್ದ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. 1960 ಮತ್ತು 70ರ ದಶಕದಲ್ಲಿ ಬಾಲಿವುಡ್ನ ಬಹುಬೇಡಿಕೆಯ ನಟಿಯಾಗಿದ್ದ ಮುಮ್ತಾಜ್ ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದರು.ಇತ್ತೀಚೆಗೆ ಮುಮ್ತಾಜ್ ನಿಧನರಾಗಿದ್ದಾರೆ ಎಂಬ ಸುದ್ದಿಯೊಂದು ಅವರ ಫೋಟೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ಮುಮ್ತಾಜ್ ಅವರ ಮಗಳು ತಾನ್ಯಾ ಮಾಧವಿ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವೊಂದನ್ನು ಅಪ್ ಲೋಡ್ ಮಾಡಿದ್ದು, ಅದರಲ್ಲಿ ಮುಮ್ತಾಜ್ ಅವರು, ‘ಹಾಯ್, ನನ್ನೆಲ್ಲಾ ಅಭಿಮಾನಿಗಳೇ.. ಐ ಲವ್ ಯೂ. ನೋಡಿ… ನಾನಿನ್ನೂ ಜೀವಂತವಾಗಿದ್ದೇನೆ. ನೀವೆಲ್ಲರೂ ಹೇಳುವಷ್ಟು ಮುದುಕಿಯೂ ಆಗಿಲ್ಲ. ನಿಮ್ಮೆಲ್ಲರ ಹಾರೈಕೆಯಿಂದ ಈಗಲೂ ಸುಂದರವಾಗಿ ಕಾಣುತ್ತಿದ್ದೇನೆ’ ಎಂದು ಹೇಳಿದ್ದಾರೆ. ಮುಮ್ತಾಜ್ ಅವರು 1974 ರಲ್ಲಿ ಉದ್ಯಮಿ ಮಯೂರ್ ಮಾಧ್ವಾನಿ ಅವರನ್ನು ವಿವಾಹವಾಗಿದ್ದು , ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತಾನ್ಯಾ ಮಾಧವಾನಿ ಅವರು ನಟ ಫಿರೋಜ್ ಖಾನ್ ಅವರ ಪುತ್ರ ಫರ್ದೀನ್ ಖಾನ್ ಅವರನ್ನು ವಿವಾಹವಾಗಿದ್ದಾರೆ.