ಬೆಂಗಳೂರು : ಕೊರೊನಾದಿಂದಾಗಿ ಚಿತ್ರರಂಗ ಬರ್ಬಾದ್ ಆಗಿದೆ. ಸದಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ಎಷ್ಟೋ ಮಂದಿ ಈಗ ಕೆಲಸ ವಿಲ್ಲದೇ ಮನೆಯಲ್ಲೇ ಕುಳಿತು ಜೀವನದ ಬಗ್ಗೆ ಯೋಜನೆ ಮಾಡುತ್ತಿದ್ದಾರೆ. ಇದರ ಮಧ್ಯೆ ಸ್ಯಾಂಡಲ್ ವುಡ್ ನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕಲಾವಿದರು ಸೇರಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು.
ಸಿಎಂ ಭೇಟಿ ಬಳಿಕ ಹ್ಯಾಟ್ರಿಕ್ ಹೀರೋ ಶಿವಣ್ಣ ಸುದ್ದಿಗಾರರೊಂದಿಗೆ ಮಾತನಾಡುತ್ತ, ಕೊರೊನಾ ಲಾಕ್ ಡೌನ್ ನಿಂದಾಗಿ ಸಿನಿಮಾ ಕ್ಷೇತ್ರಕ್ಕೆ ವಿಪರೀತ ನಷ್ಟವಾಗಿದೆ. ಆದ್ರೆ ಎಷ್ಟು ನಷ್ಟ ಆಗಿದೆ ಎಂದು ಅಂದಾಜು ಮಾಡಲು ನಾನು ಬ್ಯುಸಿನೆಸ್ ಮೆನ್ ಅಲ್ಲ. ನಾನೊಬ್ಬ ಅಷ್ಟೆ ಎಂದು ಪ್ರಶ್ನೆಯೊಂದಕ್ಕೆ ಖಾರವಾಗಿ ಉತ್ತರಿಸಿದ್ದಾರೆ.
ಮುಖ್ಯಮಂತ್ರಿಗಳ ಬಳಿ ಸಿನಿಮಾ ಥಿಯೇಟರ್ ಬಗ್ಗೆ ಚರ್ಚೆ ಮಾಡಿದ್ದೇವೆ. ಸಮಸ್ಯೆಗೆ ಬಗ್ಗೆ ಸಿಎಂ ಸ್ಪಂದಿಸಿದ್ದಾರೆ. ಥಿಯೇಟರ್ ಓಪನ್ ಬಗ್ಗೆ ಕೇಂದ್ರದ ಮಾರ್ಗಸೂಚಿಯಂತೆ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಸಿನಿಮಾ ಥೀಯೇಟರ್ ಓಪನ್ ಮಾಡುವುದು ದೊಡ್ಡದಲ್ಲ. ಆದರೆ ನಮ್ಮಲ್ಲಿ ಎಷ್ಟು ಜನ ನಿರ್ಮಾಪಕರು ರೆಡಿಯಾಗಿದ್ದಾರೆ ಎಂಬುದು ಮುಖ್ಯ. ಮೊದಲು ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಈಗಾಗಾಲೇ ಸುದೀಪ್, ಯಶ್, ವಿಜಯ್ ಸೇರಿದಂತೆ ಎಲ್ಲರೂ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ನಮ್ಮ ಸಮಸ್ಯೆ ಬಗ್ಗೆ ಸಿಎಂ ಬಳಿ ಕೇಳಿಕೊಂಡಿದ್ದೇವೆ. ಆ ಸಮಸ್ಯೆಗೆ ಪರಿಹಾರ ಒದಗಿಸುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್ ಅವರು ಕೂಡ ನಮ್ಮ ಸಮಸ್ಯೆಯನ್ನು ಆಲಿಸಿದ್ದಾರೆ ಎಂದು ತಿಳಿಸಿದ್ದಾರೆ.