ಕಳೆದ ಬಾರಿ ಸಿಎಸ್ ಕೆಯ ಟ್ರಂಪ್ ಕಾರ್ಡ್ ಬೌಲರ್.. ಈ ಬಾರಿ ವಾಟರ್ ಬಾಯ್…
ಇಮ್ರಾನ್ ತಾಹೀರ್..
ದಕ್ಷಿಣ ಆಫ್ರಿಕಾದ ಲೆಗ್ ಸ್ಪಿನ್ನರ್. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇಯರ್.
2019ರ ಐಪಿಎಲ್ ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್.
ಆದ್ರೆ ಈ ಬಾರಿಯ ಐಪಿಎಲ್ ನಲ್ಲಿ ಇಮ್ರಾನ್ ತಾಹೀರ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಅವಕಾಶವನ್ನೇ ನೀಡಿಲ್ಲ.
ಆಡುವ 11ರ ಬಳಗದಿಂದ ದೂರ ಉಳಿದಿರುವ ಇಮ್ರಾನ್ ತಾಹೀರ್ ವಾಟರ್ ಬಾಯ್ ಆಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಮ್ರಾನ್ ತಾಹೀರ್ ಗೆ ಯಾಕೆ ಅವಕಾಶ ನೀಡಿಲ್ಲ ಎಂಬುದು ಇನ್ನೂ ನಿಗೂಢವಾಗಿದೆ.
ಸಿಎಸ್ ಕೆ ತಂಡ ಈ ಬಾರಿಯ ಟೂರ್ನಿಗೆ ಮೂವರು ಸ್ಪಿನ್ನರ್ ಗಳಿಗೆ ಅವಕಾಶ ನೀಡುತ್ತಿದೆ.
ಆದ್ರೂ ಇಮ್ರಾನ್ ತಾಹೀರ್‍ಗೆ ಅವಕಾಶವನ್ನೇ ನೀಡಿಲ್ಲ. ತಂಡದ ಟ್ರಂಪ್ ಕಾರ್ಡ್ ಬೌಲರ್ ಆಗಿರುವ ತಾಹೀರ್ ಅವರನ್ನು ಕಡೆಗಣಿಸಿರುವುದು ಯಾಕೆ ಅನ್ನೋ ಪ್ರಶ್ನೆಗೆ ಧೋನಿಯೇ ಉತ್ತರ ನೀಡಬೇಕು.
ಇದೀಗ ಇಮ್ರಾನ್ ತಾಹೀರ್ ಆಡುವ ಬಳಗದಿಂದ ದೂರ ಉಳಿದಿರುವ ಬಗ್ಗೆ ಮಾತನಾಡಿದ್ದಾರೆ.
ಆರ್. ಅಶ್ವಿನ್ ಜೊತೆಗಿನ ಯೂ ಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಇಮ್ರಾನ್ ತಾಹೀರ್ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಈ ಹಿಂದಿನ ಒಂದು ಆವೃತಿಯಲ್ಲಿ ಫಾಫ್ ಡು ಪ್ಲೇಸಸ್ ತಂಡದ ವಾಟರ್ ಬಾಯ್ ಆಗಿದ್ದರು. ಈ ಬಾರಿ ನನಗೆ ಅದೇ ರೀತಿಯ ಅನುಭವ ಆಗಿದೆ ಎಂದು ಇಮ್ರಾನ್ ತಾಹೀರ್ ಬೇಸರದಿಂದಲೇ ಹೇಳಿಕೊಂಡಿದ್ದಾರೆ.
ಇನ್ನು ಸಿಎಸ್ ಕೆಯ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗಬಹುದಾ ಅನ್ನೋ ಪ್ರಶ್ನೆಗೆ ಇಮ್ರಾನ್ ತಾಹೀರ್ ಉತ್ತರಿಸಿದ್ದು ಹೀಗೆ..
ಈ ಬಗ್ಗೆ ನನಗೆ ಯಾವುದೇ ಸುಳಿವು ಸಿಕ್ಕಿಲ್ಲ. ಫಾಫ್ ಡು ಪ್ಲೇಸಸ್ ಕೂಡ ಆಟಗಾರರಿಗೆ ನೀರು ತೆಗೆದುಕೊಂಡು ಹೋಗುತ್ತಿದ್ದರು. ಆಗ ತುಂಬಾನೇ ನೋವು ಉಂಟು ಮಾಡುತ್ತಿತ್ತು. ಯಾಕಂದ್ರೆ ಡುಪ್ಲೇಸಸ್ ಅವರು ಟಿ-ಟ್ವೆಂಟಿಯಲ್ಲಿ ಅದ್ಭುತ ಆಟಗಾರ. ಅದೇ ಅನುಭವ ನನಗೆ ಈಗ ಆಗುತ್ತಿದೆ. ಫಾಫ್ ಡು ಪ್ಲೇಸಸ್ ಯಾವ ರೀತಿ ನೋವು ಅನುಭವಿಸಿದ್ರೂ ಎಂಬುದು ನನಗೆ ಈಗ ಗೊತ್ತಾಗಿದೆ ಎಂದು ಇಮ್ರಾನ್ ತಾಹೀರ್ ಹೇಳಿದ್ದಾರೆ.
ಹಾಗಂತ ಈ ಬಗ್ಗೆ ನನಗೆ ಕೀಳರಿಮೆ ಆಗುತ್ತಿಲ್ಲ. ಯಾಕಂದ್ರೆ ನಾನು ಆಡುತ್ತಿದ್ದಾಗ ನನಗೂ ಆಟಗಾರರು ನೀರು ತೆಗೆದುಕೊಂಡು ಬರುತ್ತಿದ್ದರು. ಈಗ ಅವರಿಗೆ ನಾನು ಸೇವೆ ಮಾಡುತ್ತಿದ್ದೇನೆ. ಇದು ನನ್ನ ಕರ್ತವ್ಯ. ನಾನು ಆಡುತ್ತೇನೋ ಇಲ್ಲವೋ ಎಂಬುದು ಮುಖ್ಯವಲ್ಲ. ನನಗೆ ನನ್ನ ತಂಡ ಗೆಲ್ಲಬೇಕು ಅಷ್ಟೇ. ಒಂದು ವೇಳೆ ನನಗೆ ಅವಕಾಶ ಸಿಕ್ಕರೆ ಅತ್ಯುತ್ತಮ ಪ್ರದರ್ಶನ ನೀಡಲು ಶತ ಪ್ರಯತ್ನ ಮಾಡುತ್ತೇನೆ ಎಂದು ಇಮ್ರಾನ್ ತಾಹೀರ್ ಹೇಳುತ್ತಾರೆ.
ಒಟ್ಟಿನಲ್ಲಿ ಇಮ್ರಾನ್ ತಾಹೀರ್ ಅವರನ್ನು ಕಡೆಗಣಿಸಿರುವುದರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹಿನ್ನಡೆಯಾಗಿದೆ. ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗಬಹುದು. ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಎಂಟ್ರಿಯಾಗುವ ಆಸೆ ಕಮರಿ ಹೋಗಿದೆ.
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ನೀರಸ ಪ್ರದರ್ಶನ ನೀಡಿರುವುದು ಇದೇ ಮೊದಲ ಬಾರಿ.