ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದ್ದು, ಇದೀಗ ಒಟ್ಟಾರೆ ಸೋಂಕಿತರ ಸಂಖ್ಯೆ 32 ಲಕ್ಷದ ಗಡಿದಾಟಿದೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 67,151 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 1,059 ಮಂದಿ ಹೆಮ್ಮಾರಿ ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 32,34,475ಕ್ಕೆ, ಮೃತಪಟ್ಟವರ ಸಂಖ್ಯೆ 59,449ಕ್ಕೆ ತಲುಪಿದೆ.
![]()
ದೇಶದ ಒಟ್ಟಾರೆ 32,34,475 ಕೊರೊನಾ ಸೋಂಕಿತರ ಪೈಕಿ 24,67,759 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ದೇಶದಲ್ಲಿ 7,07,267 ಸಕ್ರಿಯ ಪ್ರಕರಣಗಳಿವೆ.
ಭಾರತದಲ್ಲಿ ಇದುವರೆಗೂ 3,76,51,512 ಜನರನ್ನು ಕೊರೊನಾವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 8,23,992 ಜನರ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಕೊವಿಡ್-19 ತಪಾಸಣೆಗೊಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.









