ಗೋವಿಂದರಾಜನಗರದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ ಮಾಡಿದ ಸಚಿವ ವಿ.ಸೋಮಣ್ಣ
ಬೆಂಗಳೂರು: ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ನಿರ್ಲಕ್ಷಿಸದೆ ತಕ್ಷಣವೇ ವೈದ್ಯರ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಜನಸಾಮಾನ್ಯರ ಆರೋಗ್ಯ ರಕ್ಷ ಣೆಯೇ ನನ್ನ ಮೊದಲ ಆದ್ಯತೆ. ಈ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕೊರತೆ ಇದ್ದುದರಿಂದ ನೂತನವಾಗಿ ನಿರ್ಮಿಸಲಾದ ವಾರ್ಡ್ ಕಚೇರಿಯನ್ನೇ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಈ ಮೂಲಕ ಉಚಿತವಾಗಿ ಚಿಕಿತ್ಸೆ ನೀಡುವ ಸರಕಾರಿ ಆಸ್ಪತ್ರೆಗಳ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಾರ್ವಜನಿಕರು ಆರೋಗ್ಯ ಕಾಪಾಡಿಕೊಳ್ಳಬೇಕು. ಈ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.
ಇನ್ನು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಚಿವ ಮುನಿರತ್ನ ಅವರು ಮಾತನಾಡಿ, ಮೂಡಲಪಾಳ್ಯದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಗೊಂಡಿದೆ. ಸುಸಜ್ಜಿತ ರೀತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಗೊಂಡಿದೆ. ಎಲ್ಲಾ ಆರೋಗ್ಯ ಸಿಬ್ಬಂದಿಗಳು ಲಭ್ಯರಿದ್ದು, ಜತೆಗೆ ಉತ್ತಮ ಸೇವೆ ನೀಡಲು ಸಜ್ಜಾಗಿದ್ದಾರೆ. ಈ ಮೂಲಕ ಕ್ಷೇತ್ರದ ಜನರ ಆರೋಗ್ಯ ಸುರಕ್ಷತೆಗೆ ಹೆಚ್ಚು ಗಮನ ನೀಡಿರುವ ವಿ.ಸೋಮಣ್ಣ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.









