ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ನಾಗಾಲೋಟ ಮುಂದುವರೆದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಮಾಡಬೇಕೆಂಬ ಚರ್ಚೆ ಶುರುವಾಗಿದೆ.
ದೇಶದ 7 ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ 7 ರಾಜ್ಯಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದರು.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5.53 ಲಕ್ಷದಷ್ಟಿದ್ದು, 9 ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹಾಗೂ ಮರಣ ಪ್ರಮಾಣ ಹೆಚ್ಚಳ ಬಗ್ಗೆ ಪ್ರಧಾನಿ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೊರೊನಾಗೆ ಕಡಿವಾಣ ಹಾಕಲು ಮತ್ತೆ ಲಾಕ್‍ಡೌನ್ ಅನಿವಾರ್ಯ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವೀಕೇಂಡ್ ಲಾಕ್‍ಡೌನ್ ಅಥವಾ ರಾತ್ರಿ ಕಫ್ರ್ಯೂನಂತಹ ಕ್ರಮಗಳು ಕೊರೊನಾ ತಡೆಗೆ ಪರಿಣಾಮ ಬೀರಬಹುದು ಎನ್ನಲಾಗಿದೆ.
ಈಗ ಲಾಕ್‍ಡೌನ್‍ನಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಕೆಲವರ ಸಲಹೆಯಾಗಿದೆ. ಈಗಾಗಲೇ ಕೊರೊನಾ ಸಮುದಾಯದ ಹಂತದಲ್ಲಿ ಹರಡಿರುವುದರಿಂದ ಲಾಕ್‍ಡೌನ್ ಪ್ರಯೋಜನ ಇಲ್ಲ. ಲಾಕ್‍ಡೌನ್‍ನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಜನರು ಉದ್ಯೋಗ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಲಾಕ್‍ಡೌನ್ ಪರಿಹಾರ ಅಲ್ಲ ಎಂದು ಮತ್ತೆ ಕೆಲವರ ಅಭಿಪ್ರಾಯವಾಗಿದೆ.
ಲಾಕ್‍ಡೌನ್ ಬದಲು ಅಂಟಿಜೆನ್ ಟೆಸ್ಟ್ ಹಾಗೂ ಆರ್‍ಟಿ-ಪಿಸಿಆರ್ ಪರೀಕ್ಷೆಗಳನ್ನು ಮೂರು ಪಟ್ಟು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸೇರಿದಂತೆ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಲಾಕ್‍ಡೌನ್ ಇಲ್ಲ..ಇಲ್ಲ..ಮೈಕ್ರೋ ಸೀಲ್‍ಡೌನ್
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್‍ಡೌನ್ ಇಲ್ಲವೇ ಇಲ್ಲ, ಪ್ರಧಾನಿ ನರೇಂದ್ರ ಮೋದಿ ಲಾಕ್‍ಡೌನ್ ಮಾಡುವಂತೆ ಸೂಚನೆ ನೀಡಿಲ್ಲ. ಹೀಗಾಗಿ ರಾಜ್ಯದಲ್ಲಿ ಲಾಕ್‍ಡೌನ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಕಡ್ಡಾಯವಾಗಿ ಲಾಕ್‍ಡೌನ್ ಮಾಡುವಂತೆ ಪ್ರಧಾನಿ ಸೂಚಿಸಿಲ್ಲ. ಮೈಕ್ರೋ ಕಂಟೋನ್‍ಮೆಂಟ್ ಝೋನ್‍ನಲ್ಲಿ ಅಗತ್ಯವಿದ್ದರೆ ಮಾತ್ರ ಸೀಲ್‍ಡೌನ್ ಮಾಡುವಂತೆ ಸಲಹೆ ನೀಡಿದ್ದಾರೆ. ಇದರ ಜತೆಗೆ ಆರ್ಥಿಕ ಚಟುವಟಿಕೆಗೆ ಹಿನ್ನೆಡೆಯಾಗದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.








