ಸರ್ಕಾರಿ ಆಯುಷ್ ವೈದ್ಯರು ಮತ್ತು ಸಿಬ್ಬಂದಿಗಳಿಗೆ ವೇತನ ಹೆಚ್ಚಳ : ಆರೋಗ್ಯ ಸಚಿವ ಬಿ.ಶ್ರೀರಾಮುಲು
1 min read
ಬೆಂಗಳೂರು : ಸರ್ಕಾರಿ ಆಯುಷ್ ವೈದ್ಯರ ವೇತನ ಹೆಚ್ಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಕಳೆದ ಕೆಲ ದಿನಗಳಿಂದ ಆಯುಷ್ ಇಲಾಖೆ ವೈದ್ಯರು ಮತ್ತು ಸಿಬ್ಬಂದಿಗಳು ವಿವಿಧ ಬೇಡಿಕೆಗಳ ಈಡೇರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಹಾಗಾಗಿ ಇಂದು ಪ್ರತಿಭಟನಾಕಾರರನ್ನು ಆರೋಗ್ಯ ಸಚಿವ ಬಿ. ಶ್ರೀರಾಮುಲು ಸಭೆ ಕರೆದಿದ್ದರು. ಸಭೆಯಲ್ಲಿ ಆಯುಷ್ ಇಲಾಖೆ ವೈದ್ಯರು ಮತ್ತು ಸಿಬ್ಬಂದಿಗಳ ಬೇಡಿಕೆ ಈಡೇರಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು. ಇದೆ ವೇಳೆ ಪ್ರತಿಭಟನೆಯನ್ನು ಹಿಂಪಡಿಯರಿ ಎಂದು ಪ್ರತಿಭಟನಾಕಾರರಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ.
ಅಲೋಪತಿ ಗುತ್ತಿಗೆ ವೈದ್ಯರಿಗೆ ಯಾವ ಆಧಾರದಲ್ಲಿ ವೇತನ ಹೆಚ್ಚಿಸಲಾಗಿದೆಯೋ ಅದೇ ಮಾನದಂಡದ ಆಧಾರದ ಮೇಲೆ ಆಯುಷ್ ವೈದ್ಯರ ವೇತನ ಹೆಚ್ಚಿಸಲಾಗುವುದು. ಈ ಬಗ್ಗೆ ಆರ್ಥಿಕ ಇಲಾಖೆಗೆ ತಕ್ಷಣವೇ ಕಡತ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರ ಜೊತೆಗೆ ಆಯುಷ್ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಹೆಚ್ಚಿಸಲು ಮತ್ತು ವಿಶೇಷ ನೇಮಕಾತಿ ಮೂಲಕ ಆಯುಷ್ ವೈದ್ಯರ ನೇಮಕ ಮಾಡುವುದಾಗಿಯೂ ಶ್ರೀರಾಮುಲು ಭರವಸೆ ನೀಡಿದ್ದಾರೆ.