ಬೆಂಗಳೂರು ; ರಾಜ್ಯದಲ್ಲಿ ಕೊರೊನಾಸುರ ಇಂದು ಸ್ವಲ್ಪ ನಿರಾಳತೆ ಪ್ರದರ್ಶಿಸಿದ್ದು, ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೂ ನಡೆದ ಪರೀಕ್ಷೆಯಲ್ಲಿ ಐದು ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 606ಕ್ಕೇರಿದೆ.
ಕಲ್ಬರ್ಗಿಯಲ್ಲಿ ಮೂರು ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಕಲ್ಬರ್ಗಿಯಲ್ಲಿ ರೋಗಿ ಸಂಖ್ಯೆ 532ರ ಸಂಪರ್ಕದಿಂದ 13 ವರ್ಷದ ಬಾಲಕಿ ಮತ್ತು 54 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ 41 ವರ್ಷದ ವ್ಯಕ್ತಿಗೂ ಸೋಂಕು ಕಾಣಿಸಿಕೊಂಡಿದೆ.
ಬಾಗಲಕೋಟೆಯ ಮುದೋಳ್ ನಲ್ಲಿ ಇಬ್ಬರಿಗೆ ಸೋಂಕು ತಾಕಿದೆ. 380ರ ಸಂಖ್ಯೆಯ ರೋಗಿಯ ಸಂಪರ್ಕದಿಂದ 68 ವರ್ಷದ ವ್ಯಕ್ತಿ, 60 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 606ಕ್ಕೆ ಏರಿಕೆಯಾಗಿದೆ. 282 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 25 ಮಂದಿ ಈ ರೋಗಕ್ಕೆ ಬಲಿಯಾಗಿದ್ದಾರೆ. ಇಂದು ಒಂದೇ ದಿನ 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.