ಮಡಿಕೇರಿ: ದೇಶದೆಲ್ಲೆಡೆ ರಾಯಲ್ ಬಂಗಾಲಿ ಹುಲಿಯ ಸಂತತಿ ಹೆಚ್ಚಾಗಿದೆ. ಈಗಾಗಲೇ ನಶಿಸುತ್ತಿರುವ ಹುಲಿಗಳ ರಕ್ಷಣೆಯಲ್ಲಿ ಸಾಧನೆ ಮಾಡಿರುವುದಕ್ಕೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರಿ ವನ್ಯಜೀವಿ ಪ್ರೇಮಿಗಳಿಗೆ ಸಂತಸ ತಂದಿರುವುದಂತೂ ನಿಜ.
ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯ ಪರಿಣಾಮ ಕೊಡಗಿನ ಅರಣ್ಯದಂಚಿನ ಗ್ರಾಮ ಸೇರಿದಂತೆ ಜಲ ಮೂಲಗಳಿರುವ ಕಾಫಿ ತೋಟಗಳಲ್ಲಿ ಹುಲಿಗಳು ಪ್ರತ್ಯಕ್ಷವಾಗುತ್ತಿವೆ. ಭತ್ತದ ಗದ್ದೆಗಳ ಏರಿ, ತೋಟದ ನಡುವೆ ಹುಲಿ ಹೆಜ್ಜೆ ಪತ್ತೆ, ಮೇಯಲು ಬಿಟ್ಟ ಜಾನುವಾರುಗಳ ಮೇಲೆ ದಾಳಿ ಮಾಡಿ ಅವುಗಳ ಸಾವಿಗೆ ಕಾರಣವಾಗುತ್ತಿರುವುದು ಆತಂಕ ಮೂಡಿಸಿದೆ.
30ಕ್ಕೂ ಹೆಚ್ಚು ಹಸುಗಳ ಬಲಿ
ಇದು ಅಚ್ಚರಿಯಾದರೂ ಸತ್ಯ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ನಾಗರಹೊಳೆಗೆ ಹೊಂದಿಕೊಂಡಂತೆ ಇರುವ ವಿರಾಜಪೇಟೆ ತಾಲ್ಲೂಕಿನ ಬಹುತೇಕ ಗ್ರಾಮಗಳು ಈ ಸಮಸ್ಯೆ ಎದುರಿಸುತ್ತಿದೆ. ಅರಣ್ಯ ಇಲಾಖೆ ಬಳಿಯಿರುವ ಮಾಹಿತಿ ಪ್ರಕಾರ ಕಳೆದ 11 ತಿಂಗಳಿನಲ್ಲಿ 33 ಜಾನುವಾರುಗಳು ಹುಲಿಗಳ ದಾಳಿಗೆ ಬಲಿಯಾಗಿವೆ.
ಹೆಚ್ಚು ಹುಲಿ ಓಡಾಟದ ಪ್ರದೇಶಗಳು..
ನಾಗರಹೊಳೆ ಅಂಚಿನಲ್ಲಿರುವ ಕಾರಣ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು, ಕಿರುಮಕ್ಕಿ, ಕಲ್ಲುಬಾಣೆ, ಬಾಳೆಲೆ, ನಿಟ್ಟೂರು, ಶ್ರೀಮಂಗಲ, ಬಿಟ್ಟಂಗಾಲ, ಕೆದಮಯಳ್ಳೂರು, ತೋರ, ಬಿರುನಾಣಿ, ಆರ್ಜಿ ಗ್ರಾಮದಲ್ಲಿ ಹೆಚ್ಚಾಗಿ ಜಾನುವಾರು ಬಲಿಯಾಗಿದ್ದು, ಮಡಿಕೇರಿ ತಾಲ್ಲೂಕಿನ ಕರಿಕೆ, ಬೆಟ್ಟತ್ತೂರು ವ್ಯಾಪ್ತಿಯಲ್ಲಿ ಅಡ್ಡಾಡಿದಕ್ಕೆ ಕೆಲವು ಪುರಾವೆ ಸಿಕ್ಕಿದೆ ಜೊತೆಗೆ ಸೋಮವಾರಪೇಟೆ ತಾಲ್ಲೂಕಿನ ಕೆಲವೆಡೆ ಕಂಡು ಬಂದಿದೆ ಎನ್ನಲಾಗಿದ್ದು ಈ ಪ್ರದೇಶದಲ್ಲಿ ಹೆಚ್ಚಾಗಿರುವ ಕಾಫಿ ತೋಟಗಳಿಗೆ ತೆರಳಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.
ಕ್ರಮ ಏನು..?
ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಸಹಾ ಮಿತಿ ಮೀರಿದೆ. ಅವುಗಳ ನಿಯಂತ್ರಣ ಕಾಡಿಗೆ ಅಟ್ಟುವ ಕೆಲಸ ಅರಣ್ಯ ಇಲಾಖೆಗೆ ದೊಡ್ಡ ಸವಾಲೇ ಸರಿ. ಈ ನಡುವೆ ವ್ಯಾಘ್ರಗಳು ನಡೆಸುತ್ತಿರುವ ದಾಳಿಗಳ ನಿಯಂತ್ರಣಕ್ಕೆ ವಿಳಂಬವಾಗುತ್ತಿದೆ. ಹುಲಿ ದಾಳಿ ಮಾಡುವ ಪ್ರದೇಶದಲ್ಲಿ ಸತ್ತ ಜಾನುವಾರುವಿನ ಕಳೇಬರ ಇಟ್ಟು ಬೋನ್ ನಲ್ಲಿ ಹಿಡಿಯುವುದು ಕಷ್ಟ ಸಾಧ್ಯ.
ಕಾರಣ ಹೀಗೆ ಮಾಂಸ ಅರಸಿ ಹುಲಿಗಳು ಅದೇ ಸ್ಥಳದಲ್ಲೇ ಅಡ್ಡಾಡುತ್ತವೆ ಅಂದರೆ ಅದು ವಯಸ್ಸಾಗಿರಬೇಕು, ಇಲ್ಲವೇ ಗಾಯವಾಗಿ ಬೇಟೆಯಾಡಲು ಶಕ್ತಿ ಇಲ್ಲದೆಯೂ ಇರಬಹುದು ಅಥವಾ ತಾಯಿಯಿಂದ ಬೇರ್ಪಟ್ಟು ತನ್ನದೇ ಆವಾಸ ತಾಣ ಮಾಡಿಕೊಂಡಿರುವ ಬಾಳುಗೋಡು, ಕಿರುಮಕ್ಕಿ, ಕಲ್ಲುಬಾಣೆಯಲ್ಲಿ ಕಂಡು ಬಂದಿರುವ ವ್ಯಾಘ್ರನ ಮನಸ್ಥಿತಿಯೂ ಕಾರಣವಿರುತ್ತದೆ.
ಈಗಾಗಲೇ ಇವುಗಳ ಪತ್ತೆಗೆ ಟೈಗರ್ ಟ್ರಾಪ್ ಕ್ಯಾಮರಾಗಳನ್ನು ಅಳವಡಿಸುವ ಕೆಲಸ ಆಗಿದ್ದರೂ ಅವುಗಳ ಸ್ಥಳ(ಲೊಕೇಷನ್) ಪತ್ತೆಗೆ ಕಾಲರ್ ಐಡಿ ಅಳವಡಿಸಿ ಬಳಿಕ ಸೆರೆ ಕಾರ್ಯಾಚರಣೆ ಸೂಕ್ತ. ಇನ್ನು ಅರಣ್ಯದಲ್ಲಿ ಹುಲಿಗಳಿಗೂ ಬೇಟೆಯಾಡಲು ಸೂಕ್ತ ಪ್ರಾಣಿಗಳು ಸಿಗದಿರುವುದು ಮತ್ತು ಅರಣ್ಯದಂಚಿನಲ್ಲಿ ಸುಲಭವಾಗಿ ಸಿಗುವ ಜಾನುವಾರುಗಳು ಆಹಾರ ವಾಗುತ್ತಿವೆ. ಅರಣ್ಯ ಇಲಾಖೆ ಕಾಡಿನಲ್ಲೇ ಹುಲಿಗಳಿಗೆ ಪೂರಕ ವಾತಾವರಣ ನಿರ್ಮಾಣ ಮಾಡುವುದು, ಇದಕ್ಕಾಗಿಯೆ ಅರಣ್ಯ ಇಲಾಖೆಯಲ್ಲಿರುವ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವುದು ಸೂಕ್ತ. ಇದೀಗ ದಸರಾ ಸಂಬಂಧ ಹುಲಿ ಕಾರ್ಯಾಚರಣೆಯಲ್ಲಿ ಎಕ್ಸ್‍ಪರ್ಟ್ ಅಭಿಮನ್ಯು ಮೈಸೂರಿನಲ್ಲಿದ್ದಾನೆ. ನಿರಂತರ ಮಳೆಯೂ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿರುವುದು ಗಮನಿಸಬೇಕಾದ ವಿಚಾರ.
ಜಾನುವಾರು ರಕ್ಷಣೆಗೆ ಕೊಟ್ಟಿಗೆ ನಿರ್ಮಿಸಿಕೊಳ್ಳಿ..
ಜಾನುವಾರುಗಳನ್ನು ಸಾಕುವ ಮಾಲೀಕರಿಗೆ ಒಂದು ಜಾನುವಾರು ಬಲಿಯಾದರೆ ಅರಣ್ಯ ಇಲಾಖೆಯಿಂದ ದೊರೆಯುವುದು ಕೇವಲ ಹತ್ತು ಸಾವಿರ ಪರಿಹಾರ. ಇದಲ್ಲದೆ ದಾಳಿ ನಡೆದು ಅದೆಷ್ಟೋ ಹೊತ್ತಿನ ಬಳಿಕ ಅರಣ್ಯ ಇಲಾಖೆ ಭೇಟಿ ನೀಡುವುದು ಹಲವು ರೈತ ಸಂಘಟನೆಗಳ ಅಸಮಧಾನ ಇರುವುದು ಸತ್ಯ. ಇದಕ್ಕೆ ರೈತರಿಗೊಂದು ಸಲಹೆ ಅಂದರೆ ತಮ್ಮ ಜಾನುವಾರುಗಳನ್ನು ಸುಭದ್ರಗೊಳಿಸಿರುವ ಕೊಟ್ಟಿಗೆಯಲ್ಲಿ ಇರಿಸುವುದು. ಹುಲ್ಲು ಹೆಚ್ಚಿದೆ ಎಂದು ಬರಡು ಗದ್ದೆ, ಬಾಣೆಗಳಿಗೆ ಬಿಡುವ ಮುನ್ನ ಅರಣ್ಯ ಇಲಾಖೆಯಲ್ಲಿ ಮಾಹಿತಿ ಪಡೆಯುವುದು ಒಳಿತು. ಜನಸಂದಣಿ ಇಲ್ಲದಿರುವ ಜಾಗದಲ್ಲೇ ಹುಲಿಗಳು ಕಂಡು ಬರುವುದರಿಂದ ಕೊಟ್ಟಿಗೆಯಲ್ಲಿ ಸಾಕುವುದು ಸೂಕ್ತ ಎನ್ನುವುದು ಅರಣ್ಯ ಇಲಾಖೆಯ ಸಲಹೆ. ಆದರೆ ಒಂದು ಹಂತದಲ್ಲಿ ಪ್ರಾಯೋಗಿಕವಾಗಿ ಇದು ಕಷ್ಟ ಸಾಧ್ಯ, ಅನಿವಾರ್ಯವಾಗಿ ಜಾನುವಾರುಗಳನ್ನು ಬಿಡುವ ಮುನ್ನ ಹುಲಿಗಳ ಚಲನವಲನ ಬಗ್ಗೆ ಮಾಹಿತಿ ಪಡೆಯುದು ಸೂಕ್ತ ಎನ್ನಿಸುತ್ತದೆ.
ವರದಿ/ಫೋಟೋ: ಗಿರಿಧರ್ ಕೊಂಪುಳೀರಾ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel