ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದ ಅಫ್ಘಾನಿಸ್ತಾನ ಮುಂಬರುವ 2024ರ ಜನವರಿ 2ನೇ ವಾರದಲ್ಲಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನ ಎದುರಿಸಲಿದೆ.
ಉಭಯ ತಂಡಗಳು ಈಗಾಗಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಪಂದ್ಯಾವಳಿಗಳಲ್ಲಿ ಹಲವು ಸಂದರ್ಭಗಳಲ್ಲಿ ಮುಖಾಮುಖಿಯಾಗಿವೆ. ಆದರೆ ಇದೇ ಮೊದಲ ಬಾರಿಗೆ ಈ ಎರಡು ತಂಡಗಳು ಹಲವು ಪಂದ್ಯಗಳ ವೈಟ್-ಬಾಲ್ ಸರಣಿಯಲ್ಲಿ ಹಣಾಹಣಿ ನಡೆಸುತ್ತಿವೆ. ಭಾರತದಲ್ಲಿ ನಡೆಯುವ ಈ ಸರಣಿಯು 2024ರ ಜನವರಿ 11ರಿಂದ 17ರವರೆಗೆ ನಡೆಯಲಿದೆ ಎಂದು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಧೃಢಪಡಿಸಿದೆ.
ಭಾರತದ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಯು 2024ರಲ್ಲಿ ನಡೆಯುವ ಟಿ20 ವಿಶ್ವಕಪ್ ಪಂದ್ಯಾವಳಿಗೆ ಅಫ್ಘಾನಿಸ್ತಾನಕ್ಕೆ ತಯಾರಿ ಮಾಡಿಕೊಳ್ಳಲು ಉತ್ತಮ ಅವಕಾಶ ನೀಡಲಿದೆ. 3 ಪಂದ್ಯಗಳ ಸರಣಿಯಲ್ಲಿ ಅಫ್ಘಾನಿಸ್ತಾನ ತಂಡದ ಆಟಗಾರರು ನೀಡುವ ಪ್ರದರ್ಶನದ ಆಧಾರದಲ್ಲಿ ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡದ ಆಯ್ಕೆಗೆ ಅನುಕೂಲ ಕಲ್ಪಿಸಲಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಅಫ್ಘಾನಿಸ್ತಾನ, ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡಿದ್ದ ಅಫ್ಘಾನಿಸ್ತಾನ, ಲೀಗ್ ಹಂತದಲ್ಲಿ ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ತಂಡಗಳನ್ನ ಮಣಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದೊಂದಿಗೆ ವಿಶ್ವಕಪ್ ಅಭಿಯಾನ ಅಂತ್ಯಗೊಳಿಸಿತ್ತು. ವಿಶ್ವಕಪ್‌ನಲ್ಲಿ ತೋರಿದ ಈ ಪ್ರದರ್ಶನ ಅಫ್ಘಾನ್ ತಂಡಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಅವಕಾಶ ಸಹ ಪಡೆದಿದೆ.
ಭಾರತ v ಅಫ್ಘಾನಿಸ್ತಾ ಟಿ20 ಸರಣಿ ವೇಳಾಪಟ್ಟಿ
1ನೇ ಟಿ20 – ಜನವರಿ 11, ಮೊಹಾಲಿ
2ನೇ ಟಿ20 – ಜನವರಿ 14, ಇಂಧೋರ್
3ನೇ ಟಿ20 – ಜನವರಿ 17, ಬೆಂಗಳೂರು
IND v AFG, Team India, Afghanistan, T20I Series, World Cup