ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ನಿಂದ ಮಿಂಚಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ದಾಖಲೆಗಳನ್ನ ಬ್ರೇಕ್ ಮಾಡಿದ್ದಾರೆ.
ದೆಹಲಿಯ ಅರುಣ್ ಜೈಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾ, ಕೇವಲ 84 ಬಾಲ್‌ಗಳಲ್ಲಿ 16 ಬೌಂಡರಿ ಹಾಗೂ ಭರ್ಜರಿ 5 ಸಿಕ್ಸ್‌ಗಳ ಮೂಲಕ 131 ರನ್‌ಗಳಿಸಿದರು. ಈ ಶತಕದೊಂದಿಗೆ ಭಾರತದ ಗೆಲುವಿನ ಹೀರೋ ಆಗಿ ಮಿಂಚಿದರು. ತಮ್ಮ ಸ್ಪೋಟಕ ಬ್ಯಾಟಿಂಗ್‌ನಿಂದ ಮಿಂಚಿದ ಹಿಟ್‌ಮ್ಯಾನ್, ಕ್ರಿಕೆಟ್ ಜಗತ್ತಿನಲ್ಲಿ ಹಲವು ದಾಖಲೆಗಳನ್ನ ಮುರಿದು, ಹೊಸ ದಾಖಲೆ ಬರೆದಿದ್ದಾರೆ.
ಅಫ್ಘಾನಿಸ್ತಾನದ ವಿರುದ್ಧ ರೋಹಿತ್ ಶರ್ಮಾ, 84 ಬಾಲ್‌ಗಳಲ್ಲಿ 16 ಬೌಂಡರಿ ಹಾಗೂ ಭರ್ಜರಿ 5 ಸಿಕ್ಸ್‌ಗಳ ಮೂಲಕ 131 ರನ್‌ಗಳಿಸಿದರು. ತಮ್ಮ ಈ ಇನ್ನಿಂಗ್ಸ್‌ನ ಮೂಲಕ 473 ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 556 ಸಿಕ್ಸ್‌ಗಳನ್ನ ಬಾರಿದ ಟೀಂ ಇಂಡಿಯಾ ನಾಯಕ, ಅಂತಾರಾಷ್ಟ್ರಿಯ ಕ್ರಿಕೆಟ್‌ನಲ್ಲಿ ಅತ್ಯಧಿಕ ಸಿಕ್ಸ್‌ಗಳನ್ನ ಬಾರಿಸಿದ್ದ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಯ್ಲ್(553 ಸಿಕ್ಸ್) ದಾಖಲೆ ಮುರಿದರು. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ ಹೆಚ್ಚು ಸಿಕ್ಸ್(28 ಸಿಕ್ಸ್) ಬಾರಿಸಿದ ಹೆಗ್ಗಳಿಕೆ ಪಡೆದರು.
ಸಚಿನ್ ದಾಖಲೆ ಬ್ರೇಕ್:
ದೆಹಲಿ ಅಂಗಳದಲ್ಲಿ ಅದ್ಭುತ ಶತಕ ಸಿಡಿಸಿದ ರೋಹಿತ್, ತಮ್ಮ 31ನೇ ಅಂತಾರಾಷ್ಟ್ರೀಯ ಶತಕ ದಾಖಲಿಸಿದರು. ಈ ಶತಕದ ಮೂಲಕ ಏಕದಿನ ವಿಶ್ವಕಪ್‌ನಲ್ಲಿ ತಮ್ಮ 7ನೇ ಶತಕ ಬಾರಿಸಿದ ರೋಹಿತ್, ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ (6 ಶತಕಗಳು) ದಾಖಲೆ ಬ್ರೇಕ್ ಮಾಡಿದರು.
1000 ರನ್ ಪೂರೈಕೆ:
ಮೊದಲ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ರೋಹಿತ್ ಶರ್ಮ, ಅಫ್ಘಾನ್ ವಿರುದ್ಧ 131 ರನ್‌ಗಳಿಸುವ ಮೂಲಕ ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್‌ಗಳ ಗಡಿದಾಟಿದರು. ಜೊತೆಗೆ 63 ಬಾಲ್‌ಗಳಲ್ಲಿ ಶತಕ ಪೂರೈಸಿದ ಹಿಟ್‌ಮ್ಯಾನ್ ವಿಶ್ವಕಪ್‌ನಲ್ಲಿ ಭಾರತದ ಪರ ವೇಗದ ಶತಕ ಬಾರಿಸಿದ ಹೆಗ್ಗಳಿಕೆ ಜೊತೆಗೆ, 30 ಬಾಲ್‌ಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ವಿಶ್ವಕಪ್‌ನಲ್ಲಿ ಭಾರತದ ಪರ 2ನೇ ವೇಗದ ಶತಕ ದಾಖಲಿಸಿದರು.
ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ:
ಭರ್ಜರಿ ಶತಕ ದಾಖಲಿಸಿ ಅಫ್ಘಾನಿಸ್ತಾನದ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ ರೋಹಿತ್ ಶರ್ಮಾ, ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಇದರೊಂದಿಗೆ ವಿಶ್ವಕಪ್‌ನಲ್ಲಿ 6ನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆ ಬರೆದರು. ರೋಹಿತ್ ಶರ್ಮಾ ಬ್ಯಾಟ್‌ನಿಂದ ಬಂದ 131 ರನ್‌ಗಳು, ವಿಶ್ವಕಪ್‌ನಲ್ಲಿ ಚೇಸಿಂಗ್‌ನಲ್ಲಿ ಭಾರತದ ಪರ ದಾಖಲಾದ ಗರಿಷ್ಠ ಸ್ಕೋರ್ ಆಗಿದೆ. ಇದರ ಜೊತೆ ವರ್ಷವೊಂದರಲ್ಲಿ 50ಕ್ಕೂ ಹೆಚ್ಚು ಸಿಕ್ಸ್ ಬಾರಿಸಿದ ಭಾರತದ ಮೊದಲ ಕ್ಯಾಪ್ಟನ್ ಹಾಗೂ ನಾಲ್ಕು ಪ್ರತ್ಯೇಕ ವರ್ಷಗಳಲ್ಲಿ 50 ಸಿಕ್ಸ್ ಬಾರಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯನ್ನೂ ಸಹ ರೋಹಿತ್ ತಮ್ಮದಾಗಿಸಿಕೊಂಡರು.
IND v AFG, Team India, Rohit Sharma, World Cup, ODI Cricket