ಇತ್ತೀಚಿಗಷ್ಟೇ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ. ಈ ನಡುವೆ ನವೆಂಬರ್ 23ರಿಂದ ಆರಂಭವಾಗುವ ಸರಣಿಯಿಂದ ಡೇವಿಡ್ ವಾರ್ನರ್ ಸೇರಿ ಹಲವು ಹಿರಿಯ ಆಟಗಾರರು ಹೊರಗುಳಿಯಲಿದ್ದಾರೆ.
ಆಸೀಸ್ನ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರೊಂದಿಗೆ ತಂಡದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್, ಪ್ರಮುಖ ಬೌಲರ್ಗಳಾದ ಜೋಶ್ ಹೇಜ಼ಲ್ವುಡ್, ಮಿಚೆಲ್ ಸ್ಟಾರ್ಕ್, ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಮಾರ್ಷ್ ಅವರುಗಳು ಸಹ ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ. ಪ್ರಮುಖ ಆಟಗಾರರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಮ್ಯಾಥ್ಯೂ ವೇಡ್ ಅವರ ನೇತೃತ್ವದಲ್ಲಿ ಆಸೀಸ್ ತಂಡ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದೆ.
ಈ ಹಿಂದೆ ಪ್ರಕಟಿಸಲಾಗಿದ್ದ 15 ಮಂದಿ ಆಟಗಾರರ ಆಸ್ಟ್ರೇಲಿಯಾ ತಂಡದಲ್ಲಿ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರಿಗೆ ಸ್ಥಾನ ನೀಡಲಾಗಿತ್ತು. ಆದರೆ ಇದೀಗ ವಿಶ್ವಕಪ್ ಅಭಿಯಾನದ ಯಶಸ್ವಿ ಮತ್ತು ಬೇಡಿಕೆಯ ಹಿನ್ನೆಲೆಯಲ್ಲಿ ವಾರ್ನರ್ ತವರಿಗೆ ಹಿಂದಿರುಗಲು ಆಸೀಸ್ನ ಆಯ್ಕೆಗಾರರು ನಿರ್ಧರಿಸಿದ್ದಾರೆ. ಡೇವಿಡ್ ವಾರ್ನರ್ ಅವರ ಅನುಪಸ್ಥಿತಿ ಹಿನ್ನೆಲೆಯಲ್ಲಿ ಆಲ್ರೌಂಡರ್ ಆರೋನ್ ಹಾರ್ಡಿ ಅವರನ್ನ ಬದಲಿ ಆಟಗಾರನಾಗಿ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಪ್ರಸಕ್ತ ವರ್ಷದ ಆರಂಭದಲ್ಲಿ ಡರ್ಬನ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಆರನ್ ಹಾರ್ಡಿ, ಚೊಚ್ಚಲ ಪಂದ್ಯವನ್ನಾಡಿದ್ದರು. ತಂಡದ ಪ್ರಮುಖ ಆಟಗಾರರ ಜೊತೆಗೆ ಆಸ್ಟ್ರೇಲಿಯಾದ ಹೆಡ್ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ಕೂಡ ಭಾರತ ವಿರುದ್ಧ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಇವರ ಬದಲಿಗೆ ಸಹಾಯಕ ಕೋಚ್ ಆಂಡ್ರೆ ಬೊರೊವೆಕ್ ಅವರು ತಂಡದ ಜವಾಬ್ದಾರಿವಹಿಸಿಕೊಳ್ಳಲಿದ್ದಾರೆ.
ಭಾರತ ಸರಣಿಗಾಗಿ ಆಸ್ಟ್ರೇಲಿಯಾ ತಂಡ:
ಮ್ಯಾಥ್ಯೂ ವೇಡ್ (ನಾಯಕ), ಆರನ್ ಹಾರ್ಡಿ, ಜೇಸನ್ ಬೆಹ್ರೆನ್ಡಾರ್ಫ್, ಸೀನ್ ಅಬಾಟ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್ವೆಲ್, ತನ್ವೀರ್ ಸಂಘ, ಮ್ಯಾಟ್ ಶಾರ್ಟ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಕೇನ್ ರಿಚರ್ಡ್ಸನ್, ಆಡಮ್ ಜ್ಹಂಪ.
IND v AUS, Team India, Australia, David Warner, T20I Series